ಮೈಸೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರ ಸೋದರ ಎನ್ನಲಾಗಿರುವ ಕೆ.ಸುಬ್ರಮಣ್ಯ ರೈ ಎಂಬುವವರ ಮೈಸೂರಿನ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಈ ವೇಳೆ ಮನೆ ಮುಂಭಾಗದ ಅಲಂಕಾರಿಕ ಗಿಡದೊಳಗೆ ಹಣ್ಣಿನ ಬಾಕ್ಸ್ಗಳಲ್ಲಿ ಇಟ್ಟಿದ್ದ ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವುದನ್ನು ಮೂಲಗಳು ಖಚಿತಪಡಿಸಿವೆ.
ಕೆ.ಸುಬ್ರಹ್ಮಣ್ಯ ರೈ ಎಂಬುವವರು ಮೈಸೂರು ನಗರದ ನಿವಾಸಿಯಾಗಿದ್ದು, ಇವರ ಮನೆಯ ಮೇಲೆ ಸೋಮವಾರ ಸಂಜೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ಸಂದರ್ಭದಲ್ಲಿ ಇವರ ಮನೆಯ ಗಾರ್ಡನ್ನಲ್ಲಿದ್ದ ಅಲಂಕಾರಿಕ ಗಿಡದ ಒಳಗೆ ಇರುವ ಬಾಕ್ಸ್ಗಳಲ್ಲಿ ಪ್ಯಾಕ್ ಮಾಡಿ ಒಂದು ಕೋಟಿ ರೂ ಹಣ ಬಚ್ಚಿಟ್ಟಿದ್ದು, ಅಧಿಕಾರಿಗಳು ಪತ್ತೆ ಹಚ್ಚಿ ಹಣ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಐಟಿ ಮೂಲಗಳಿಂದ ತಿಳಿದು ಬಂದಿದೆ. ಮಂಗಳವಾರವೂ ಸಹ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ವಿಡಿಯೋ ವೈರಲ್: ಕೆ.ಸುಬ್ರಹ್ಮಣ್ಯ ರೈ ಅವರ ಮೈಸೂರು ಮನೆಯ ಗಾರ್ಡನ್ ಅಲಂಕಾರಿಕ ಗಿಡದಲ್ಲಿ ಬಚ್ಚಿಟ್ಟಿದ್ದ ಒಂದು ಕೋಟಿ ಹಣದ ಬಾಕ್ಸ್, ಅಧಿಕಾರಿಗಳು ಹಣ ಎಣಿಸುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಂದೂ ಸಹ ಮೈಸೂರಿನಲ್ಲಿ ಐಟಿ ರೇಡ್: ಮೈಸೂರಿನ ಪ್ರಸಿದ್ಧ ಸಿಹಿತಿಂಡಿ ತಯಾರಕರು ಹಾಗೂ ಮಾರಾಟಗಾರರು ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವರ ಅಂಗಡಿಗಳು, ಮನೆ, ಕಚೇರಿಗಳ ಮೇಲೆ ಇಂದು ಬೆಳಗಿನ ಜಾವ 5 ಗಂಟೆಗೆ, ಬೇರೆ ಕಡೆಯಿಂದ ಬಂದ ಸುಮಾರು 20 ಜನ ಐಟಿ ಅಧಿಕಾರಿಗಳು, ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದವರ ಆಸ್ತಿಗಳ ಐದು ಕಡೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯ ಬಿಲ್ಡರ್ಸ್ ಮನೆ, ಕಚೇರಿ ಮೇಲೆ ಐಟಿ ದಾಳಿ: ದಾಖಲೆ ಪರಿಶೀಲನೆ