ಮೈಸೂರು: ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ ಕೊರೊನಾದಿಂದ ಮೃತಪಟ್ಟವರ ಹೆಸರು ದಾಖಲಾಗಿಲ್ಲ. ಇದರ ಬಗ್ಗೆ ಪರಾಮರ್ಶೆ ಮಾಡುತ್ತೇವೆ. ಇದರಿಂದ ಸೂಕ್ತ ಪ್ರಮಾಣದ ಸಾವಿನ ಸಂಖ್ಯೆ ತಿಳಿಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಹೇಳಿದರು.
ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶ ಹಾಗೂ ಹಳ್ಳಿಗಳಲ್ಲಿ ಕೊರೊನಾದಿಂದ ಮೃತಪಟ್ಟವರ ಹೆಸರು ವಾರ್ ರೂಂನಲ್ಲಿ ಕೆಲವು ದಾಖಲಾಗಿರುವುದಿಲ್ಲ. ಇದರ ಪರಾಮರ್ಶೆ ಮಾಡುತ್ತಿದ್ದೇವೆ. ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ನಿಖರವಾಗಿ ಕೊಡುವುದರಿಂದ ಡೆತ್ ರೇಟ್ ತಿಳಿಯಲಿದೆ ಎಂದರು.
ಮೈಸೂರಿನಲ್ಲಿ ಸಾವಿನ ಪ್ರಮಾಣ ಮೂರು ದಿನಗಳಿಂದ ಕಡಿಮೆಯಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಕೊರೊನಾ ಸೋಂಕು ತಗುಲಿದವರಿಗೆ, ಹೋಂ ಐಸೋಲೇಷನ್ ಕಡಿಮೆ ಮಾಡಿ, ಆಸ್ಪತ್ರೆಗಳಿಗೆ ದಾಖಲಾಗುವುವಂತೆ ವ್ಯವಸ್ಥೆ ಮಾಡಲಾಗಿದೆ.
ಕೊರೊನಾ 3ನೇ ಅಲೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.