ಮೈಸೂರು : ಕಾದಾಟದಲ್ಲಿ ಗಾಯಗೊಂಡಿದ್ದ ಹೆಣ್ಣು ಹುಲಿಯನ್ನು ಸಾಕಾನೆಯ ನೆರವಿನಿಂದ ಸೆರೆ ಹಿಡಿದು ಕಾಡಿನಲ್ಲಿಯೇ ಚಿಕಿತ್ಸೆ ನೀಡಿ ಮರಳಿ ಕಾಡಿಗೆ ಬಿಟ್ಟಿರುವ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ಅರಣ್ಯ ವಲಯದಲ್ಲಿ ನಡೆಯಿತು. ಇಂಥದ್ದೊಂದು ಪ್ರಯೋಗ ನಾಗರಹೊಳೆಯಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ.
ಹೆಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ವ್ಯಾಪ್ತಿಯ ಡಿ.ಬಿ.ಕುಪ್ಪೆ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ಕುಂಟುತ್ತಾ ಓಡಾಡುತ್ತಿದ್ದ ಹೆಣ್ಣು ಹುಲಿಯೊಂದನ್ನು ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಗಮನಿಸಿದ್ದರು. ಸಿಬ್ಬಂದಿ ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಈ ಹುಲಿಯು ಮತ್ತೆ ಟೂರಿಸಂ ವಲಯದಲ್ಲಿ ಕಾಣಿಸಿಕೊಂಡಿದ್ದು, ಮುಂಗಾಲಿಗೆ ಗಾಯವಾಗಿ ನಡೆಯಲಾಗದೇ ಪರದಾಡುತ್ತಿದ್ದುದು ಗೊತ್ತಾಗಿದೆ.
"ಗಾಯಗೊಂಡಿದ್ದ ಹುಲಿಯನ್ನು ಸಾಕಾನೆ ಅರ್ಜುನನ ನೇತೃತ್ವದಲ್ಲಿ ಡಿ.ಬಿ.ಕುಪ್ಪೆ ವ್ಯಾಪ್ತಿಯ ಕಬಿನಿ ಹಿನ್ನೀರಿನ ಸಮೀಪ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಲಾಯಿತು. ಪಶುವೈದ್ಯರ ಸಹಾಯದಿಂದ ಹುಲಿಗೆ ಅರಿವಳಿಕೆ ನೀಡಿ ಹುಲಿಯನ್ನು ಸೆರೆ ಹಿಡಿಯಲಾಯಿತು. ಸೂಕ್ತ ಚಿಕಿತ್ಸೆ ನೀಡಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಕಾದಾಟದಲ್ಲಿ ಹುಲಿಯ ಬಲ ಮುಂಗಾಲಿನ ಪಾದಕ್ಕೆ ಗಾಯವಾಗಿತ್ತು. ಇದರಿಂದ ಹುಲಿ ನಡೆಯಲಾಗದೆ ಪರದಾಡುತ್ತಿತ್ತು. ಇದೀಗ ಚಿಕಿತ್ಸೆ ನೀಡಿ ಕಾಡಿಗೆ ಬಿಡಲಾಗಿದೆ" ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಎಫ್ ಬಿ.ಎನ್.ಎನ್.ಮೂರ್ತಿ, ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ರಮೇಶ್, ಪಶುವೈದ್ಯ ರಮೇಶ್, ಆರ್‌ಎಫ್‌ಒಗಳಾದ ಸಿದ್ದರಾಜು, ಹರ್ಷಿತ್ ಮತ್ತಿತರರಿದ್ದರು.
ಡಿಸಿಎಫ್ ಹೇಳಿಕೆ: "ಹುಲಿಗೆ ಗಾಯವಾಗಿರುವುದನ್ನು ನಮ್ಮ ಸಿಬ್ಬಂದಿ ಗಮನಿಸಿದ್ದರು. ಟೂರಿಸಂ ವಲಯದಲ್ಲಿಯೂ ಹುಲಿ ಕಂಡು ಬಂದು ನಡೆದಾಡಲು ಪರದಾಡುತ್ತಿತ್ತು. ಈ ಬಗ್ಗೆ ಚರ್ಚಿಸಿ ಕಾಡಿನಲ್ಲೇ ಚಿಕಿತ್ಸೆ ನೀಡಿ ಮರಳಿ ಕಾಡಿಗೆ ಬಿಡಲಾಗಿದೆ" ಎಂದು ನಾಗರಹೊಳೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದರು.
ಇದನ್ನೂ ಓದಿ : ಸರಿಸ್ಕಾ ಅರಣ್ಯದಲ್ಲಿ ಹೆಚ್ಚುತ್ತಿದೆ ವ್ಯಾಘ್ರಗಳ ಸಂಖ್ಯೆ.. ಒಂದೇ ಬಾರಿ 3 ಹುಲಿಗಳನ್ನ ನೋಡಿ ದಂಗಾದ ಪ್ರವಾಸಿಗರು!