ಮೈಸೂರು : ಕೋವಿಡ್ ಹಿನ್ನೆಲೆ ಕರ್ನಾಟಕ ಹಾಗೂ ಕೇರಳ ಗಡಿ ಮಧ್ಯೆ ವಾಹನಗಳ ಸಂಚಾರ ಬಗ್ಗೆ ತೀವ್ರ ನಿಗಾವಹಿಸಬೇಕು. ಹಾಗೆಂದು ಸಾರ್ವಜನಿಕರು ಸೇರಿ ವ್ಯಾಪಾರ, ವಹಿವಾಟಿಗೂ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವ ಎಸ್ ಟಿ ಸೋಮಶೇಖರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಆರಂಭವಾಗುವ ಲಕ್ಷಣ ಕಾಣುತ್ತಿರುವ ಹಿನ್ನೆಲೆ, ಕೇರಳ ಗಡಿ ಭಾಗದಿಂದ ವಾಹನಗಳ ಸಂಚಾರ ಹಾಗೂ ತಪಾಸಣೆ ಕ್ರಮ ಹೇಗಿರಬೇಕು ಎಂಬ ಬಗ್ಗೆ ಉನ್ನತಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಎಪಿಎಂಸಿ ಸೇರಿ ರಾಜ್ಯದೊಳಗೆ ಹಾಗೂ ಹೊರಗೆ ಮೈಸೂರಿನ ಮುಖಾಂತರ ತರಕಾರಿ ಹಾಗೂ ಆಹಾರ ಧಾನ್ಯಗಳ ವಾಹನಗಳ ಸಂಚಾರ ಆಗಲೇಬೇಕು.
ಸಂಚಾರವನ್ನು ನಿರ್ಬಂಧ ಮಾಡಿದರೆ ವಹಿವಾಟು ಸೇರಿ ಎಲ್ಲದಕ್ಕೂ ತೊಂದರೆಯಾಗಲಿದೆ. ಹೀಗಾಗಿ, ಆ್ಯಂಟಿಜೆನ್ ಟೆಸ್ಟ್, ಟೆಂಪ್ರೇಚರ್ ಟೆಸ್ಟ್ಗಳು ನಡೆಯಲಿ. ಅದಕ್ಕೆ ಬೇಕಿರುವ ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳಿ ಎಂದು ಸೂಚಿಸಿದರು.
ಗಡಿ ಭಾಗದಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿ ಅಗತ್ಯ ಕ್ರಮಕೈಗೊಳ್ಳಬೇಕು. ಎಲ್ಲ ಬಸ್ಗಳ ಪ್ರಯಾಣಿಕರ ತಪಾಸಣೆ ಕೂಡ ಆಗಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಮರ್‌ನಾಥ್ ಅವರಿಗೆ ಸಚಿವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಂಸದರಾದ ಪ್ರತಾಪ್ ಸಿಂಹ, ದಕ್ಷಿಣ ವಲಯ ಐಜಿ ಪವಾರ್ ಪ್ರವೀಣ್ ಮಧುಕರ್, ಪೊಲೀಸ್ ಆಯುಕ್ತರಾದ ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್ ಉಪಸ್ಥಿತರಿದ್ದರು.