ಮೈಸೂರು: ಬೆಂಗಳೂರು- ಮೈಸೂರು ನಡುವಿನ ಎಕ್ಸ್‌ಪ್ರೆಸ್ ಹೈವೇಯನ್ನ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 12 ರಂದು ಮಂಡ್ಯದ ಗೆಜ್ಜಲಗೆರೆಯ ಬಳಿ ಉದ್ಘಾಟನೆ ಮಾಡಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಸ್ವಾಗತಿಸಿ ಮಾತನಾಡಿದ ಅವರು, ಮಂಡ್ಯ ಮತ್ತು ಮದ್ದೂರಿನ ಮಧ್ಯದಲ್ಲಿರುವ ಗೆಜ್ಜಲಗೆರೆ ಬಳಿಯ ಹೈವೇ ಮೇಲೆ ಪ್ರಧಾನಿಯ ಚಾಪರ್ ಲ್ಯಾಂಡ್ ಆಗಲಿದ್ದು, ನಂತರ ಅವರು ಬೆಂಗಳೂರು- ಮೈಸೂರು ನಡುವಿನ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ಹೈವೇ ಪಕ್ಕದಲ್ಲಿ ಸ್ಥಳವನ್ನು ಗುರುತು ಮಾಡಲಾಗಿದ್ದು, ಅಲ್ಲಿ ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿದೆ. ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಮತ್ತು ಮೈಸೂರು ಜನರನ್ನು ಉದ್ದೇಶಿಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯ ನಾಯಕರು ಮತ್ತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾಗವಹಿಸಲಿದ್ದಾರೆ. ಹೈವೇ ಮೇಲೆ ಪ್ರಧಾನಿ ಅವರ ಚಾಪರ್ ಲ್ಯಾಂಡ್ ಮಾಡುವ ಬಗ್ಗೆ ಎಸ್ಪಿಜಿಗೆ ಅನುಮತಿ ಕೇಳಿದ್ದೇವೆ ಎಂದರು.
ಎಸ್ಪಿಜಿ ಅನುಮತಿಯನ್ನು ನೀಡದಿದ್ದರೆ ಮಂಡ್ಯದ ಪಿಎಸ್ ಕಾಲೇಜಿನಲ್ಲಿ ಚಾಪರ್ ಲ್ಯಾಂಡ್ ಆಗಲಿದ್ದು, ಪ್ರಧಾನಿ ಮೋದಿ ಮಂಡ್ಯ ನಗರದಲ್ಲಿ ಎರಡು ಕಿ.ಮೀ ರೋಡ್ ಶೋ ನಡೆಸಿ ಅಲ್ಲಿಂದ ಗೆಜ್ಜಲಗೆರೆಗೆ ತಲುಪಲಿದ್ದಾರೆ. ಇನ್ನು ಪ್ರಧಾನಿ ಅದೇ ಕಾರ್ಯಕ್ರಮದಲ್ಲಿ ಮೈಸೂರು - ಕೊಡಗು ಹೈವೇಯ ಭೂಮಿ ಪೂಜೆಯನ್ನೂ ನೆರವೇರಿಸಲಿದ್ದಾರೆ ಎಂದು ಸಂಸದರು ಮಾಹಿತಿ ನೀಡಿದರು.
ವಿಜಯ ಸಂಕಲ್ಪ ಯಾತ್ರೆಗೆ ಜೆ ಪಿ ನಡ್ಡಾ ಚಾಲನೆ: ಇನ್ನು ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಮೊದಲನೇ ತಂಡ ಇಂದು ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಪೂಜೆಯನ್ನು ಸಲ್ಲಿಸಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಂದ ಯಾತ್ರೆ ಚಾಲನೆ ನೀಡಿದ್ದಾರೆ. ಅವರ ಜೊತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್.ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡಾ ಇದ್ದರು. ಸಂಜೆ ಹನೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆದಿದ್ದು, ಆ ಕಾರ್ಯಕ್ರಮವನ್ನು ಮುಗಿಸಿ ಯಾತ್ರೆ ನಂಜನಗೂಡಿಗೆ ಮತ್ತು ಮೈಸೂರು ಗ್ರಾಮಂತರಕ್ಕೆ ಹೋಗಿ ನಂತರ ಮಾರ್ಚ್ 5 ರಂದು ಮೈಸೂರು ನಗರದಲ್ಲಿ ಕಾರ್ಯಕ್ರಮ ನಡೆಯುತ್ತದೆ ಅಲ್ಲಿಂದ ಯಾತ್ರೆ ಮಂಡ್ಯಕ್ಕೆ ತೆರಳಲಿದೆ ಎಂದರು.
ಮಾರ್ಚ್ 14 ರಿಂದ ಮೊದಲ ಹಂತದ ಟೋಲ್ ಸಂಗ್ರಹ ಆರಂಭ: ಟೋಲ್ ಸಂಗ್ರಹಕ್ಕೂ, ಹೈವೇ ಪಕ್ಕ ಸರ್ವೀಸ್ ರೋಡ್ ನಿರ್ಮಾಣ ಮಾಡುವುದಕ್ಕೂ ಯಾವುದೇ ಸಂಬಂಧ ಇಲ್ಲ. ಹೈವೇ ಪಕ್ಕದಲ್ಲಿ ಸರ್ವೀಸ್ ರೋಡ್ ನಿರ್ಮಾಣದ ಕೆಲಸ ವಿಳಂಬವಾಗಲು ಕಾರಣವೇನೆಂದರೆ, ಆ ಸ್ಥಳದ ವ್ಯಕ್ತಿಗಳು ಹೈಕೋರ್ಟ್ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಈ ರೀತಿ ನಾಲ್ಕು ಸ್ಥಳಗಳಲ್ಲಿ ತಡೆಯಾಜ್ಞೆ ತಂದಿದ್ದಾರೆ. ಈ ತಡೆಯಾಜ್ಞೆ ತೆರವು ಮಾಡುವಂತೆ ವಕೀಲರ ಜೊತೆ ಮಾತನಾಡುತ್ತಿದ್ದೇವೆ. ಅದಷ್ಟು ಬೇಗ ತಡೆಯಾಜ್ಞೆ ತೆರವುಗೊಳಿಸಿ, ಸರ್ವೀಸ್ ರೋಡ್ ನಿರ್ಮಾಣ ಮಾಡಲಾಗುವುದು. ಮಾರ್ಚ್ 14 ರಿಂದ ಬೆಂಗಳೂರುನಿಂದ ನಿಡಗಟ್ಟದವರೆಗಿನ ಹೈವೇ ಹೆದ್ದಾರಿಯಲ್ಲಿ ಮೊದಲ ಹಂತದ ಟೋಲ್ ಸಂಗ್ರಹ ಆರಂಭವಾಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದರು.
ಕಾಂಗ್ರೆಸ್ನವರಿಂದ ಪಾಠ ಕಲಿಯಬೇಕಾಗಿಲ್ಲ : ಬೆಂಗಳೂರು-ಮೈಸೂರು ನಡುವಿನ ಎಕ್ಸ್ ಪ್ರೆಸ್ ಹೈವೇ ಪಕ್ಕದಲ್ಲಿ, ಸರ್ವೀಸ್ ರೋಡ್ ನಿರ್ಮಾಣ ಮಾಡದೇ ಟೋಲ್ ಸಂಗ್ರಹಕ್ಕೆ ಮುಂದಾದರೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಸಂಸದರು, ಮೈಸೂರು ಭಾಗದಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ನಂಜನಗೂಡು ಹಾಗೂ ಟಿ.ನರಸೀಪುರ ಹೈವೇ ರಸ್ತೆಗಳನ್ನ ನಿರ್ಮಾಣ ಮಾಡಲಾಗಿದ್ದು, ಇವುಗಳಿಗೆ ಸರ್ವೀಸ್ ರೋಡ್ಗಳೇ ಇಲ್ಲ, ಆದರೂ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಏಕೆ ?, ಕಾಂಗ್ರೆಸ್ ನಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.
ಇದನ್ನೂ ಓದಿ:ವಿಜಯ ಸಂಕಲ್ಪ ಯಾತ್ರೆಗೆ ಹಸಿರು ನಿಶಾನೆ ತೋರಿಸಿದ ಜೆ.ಪಿ ನಡ್ಡಾ