ಮೈಸೂರು: ಮುಂಬರುವ ಮಕರ ಸಂಕ್ರಾಂತಿ ಹಬ್ಬದ ನಂತರ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರದ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾಹಿತಿ ನೀಡಿದ್ದಾರೆ. ನಗರದ ಸರಸ್ವತಿಪುರಂನ ಕೃಷ್ಣಧಾಮದಲ್ಲಿ ಚಾತುರ್ಮಾಸ ವ್ರತ ಆಚರಣೆಯಲ್ಲಿರುವ ಶ್ರೀಗಳು ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅವರ ಸಮಯ ನೋಡಿಕೊಂಡು ದಿನಾಂಕ ನಿಗದಿ ಮಾಡಲಾಗುತ್ತದೆ ಎಂದರು.
ಪ್ರತಿಯೊಬ್ಬರೂ ತಮ್ಮ ಕಾರ್ಯಕ್ಷೇತ್ರದಲ್ಲಿ ಸಮಾಜಕ್ಕೆ ಕೊಡುಗೆ ನೀಡಬೇಕು. ರಾಮನ ಗುಣಗಳಲ್ಲಿ ಎಲ್ಲರೂ ಒಂದೊಂದು ಗುಣ ಅಳವಡಿಸಿಕೊಂಡರೆ ರಾಮರಾಜ್ಯ ಕಲ್ಪನೆ ನನಸಾಗಲಿದೆ. ರಾಮಭಕ್ತಿ ಬೇರೆ ಅಲ್ಲ, ದೇಶಭಕ್ತಿ ಬೇರೆ ಅಲ್ಲ. ರಾಮಸೇವೆ, ದೇಶ ಸೇವೆ ಎರಡೂ ಒಂದೇ. ಸಮಾಜದಲ್ಲಿ ಇರುವ ಅಸಹಾಯಕರಿಗೆ, ಬಡವರಿಗೆ, ಕಷ್ಟದಲ್ಲಿ ಇರುವವರಿಗೆ ಅವರವರ ವೃತ್ತಿ ಸೀಮೆಯಲ್ಲಿ ನೆರವಾಗುವುದೇ ರಾಮ ಸೇವೆ ಎಂದು ಹೇಳಿದರು.
ಗೋವುಗಳ ರಕ್ಷಣೆಗೆ ಮಠದಿಂದ ಹೆಚ್ಚಿನ ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ತೆರೆಯಬೇಕೆಂಬುದು ನಮ್ಮ ಅಪೇಕ್ಷೆ. ಆ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ. ಇಂದು ಸಮಾಜದಲ್ಲಿ ಅನೇಕ ಬಗೆಯ ಗೊಂದಲಗಳು ಸೃಷ್ಟಿಯಾಗಿವೆ. ಹಿಂಸೆಯ ವೈಭವೀಕರಣವಾಗುತ್ತಿದೆ. ವಿದೇಶಗಳಲ್ಲಿ ಅಪರಾಧ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ನಮ್ಮಲ್ಲಿ ಆ ರೀತಿ ಇಲ್ಲ. ಕಾನೂನಿನ ಮೇಲೆ ಭಯವೇ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕು. ಜನ ವಿಕಾಸಗಳಿಸಬೇಕು. ಪತ್ರಿಕಾರಂಗ ಸಮಾಜ ಕಟ್ಟುವ ಕೆಲಸ ಮಾಡಬೇಕು. ಸಾಮರಸ್ಯ ಗಟ್ಟಿಗೊಳಿಸುವ ಕೆಲಸವನ್ನು ಮಾಡುವ ಮೂಲಕ ಪತ್ರಿಕಾರಂಗ ಸಮಾಜದಲ್ಲಿ ಮಾದರಿಯಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಮಣಿಪುರ ಸಂಘರ್ಷ; ಸಂಧಾನಕ್ಕೆ ಸಿದ್ಧ: ಮಣಿಪುರ ಪ್ರಕರಣವನ್ನು ಇಲ್ಲಿಯವರೆಗೆ ಬೆಳೆಯಲು ಬಿಟ್ಟಿದ್ದು ಸರಿಯಲ್ಲ. ಅದೊಂದು ದೊಡ್ಡ ಕಗ್ಗಂಟಾಗಲಿದೆ. ಅಲ್ಲಿ ನಡೆಯುತ್ತಿರುವ ಹಿಂಸೆಗೆ ಮೂಲ ಕಾರಣವೇನು ಎಂಬುದೇ ಅರ್ಥವಾಗುತ್ತಿಲ್ಲ. ಪರಿಸ್ಥಿತಿ ಕೈಮೀರಿದೆ. ಇಷ್ಟಾಗಿಯೂ ಆ ರಾಜ್ಯದಲ್ಲಿ ಸಂಘರ್ಷಕ್ಕೆ ನಿಂತಿರುವ ಗುಂಪುಗಳ ಜೊತೆ ಮಾತನಾಡಿ ಶಾಂತಿ ಸ್ಥಾಪಿಸಲು ಮಧ್ಯಪ್ರವೇಶ ಮಾಡಲು ಸಿದ್ಧ. ಈ ನಿಟ್ಟಿನಲ್ಲಿ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಒಂದು ವೇಳೆ ಅನುಮತಿ ನೀಡಿದರೆ, ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿಸಲು ಮುಂದಾಗುವುದಾಗಿ ಶ್ರೀಗಳು ತಿಳಿಸಿದರು.
ಉಡುಪಿ ಮಠದಿಂದ ವಸತಿರಹಿತರಿಗೆ ಮನೆ ನೀಡಲು ಮುಂದಾಗಿದ್ದು, ಈಗಾಗಲೇ ಉಡುಪಿಯಲ್ಲಿ 8 ಮನೆ ನಿರ್ಮಾಣ ಮಾಡಲಾಗಿದೆ. ಮೈಸೂರಿನಲ್ಲೂ ಇಬ್ಬರು ದಾನಿಗಳು ಮನೆ ನಿರ್ಮಿಸಿಕೊಡಲು ಮುಂದೆ ಬಂದಿದ್ದಾರೆ. ನಮ್ಮ ಸಾಧ್ಯತೆಗೆ ಅನುಗುಣವಾಗಿ ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡಲು ಮುಂದಾಗುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಜನವರಿ ತಿಂಗಳಾಂತ್ಯದೊಳಗೆ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ: ಪೇಜಾವರ ಶ್ರೀ