ಮೈಸೂರು : ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದಾಗ ಸರ್ಕಾರ ನರಹಂತಕವಾಗಿತ್ತು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅತಿಹೆಚ್ಚು ಕೊಲೆಯಾದವು. 24 ಹಿಂದೂಗಳ ಕೊಲೆಯಾಯಿತು. 3 ಸಾವಿರ ರೈತರ ಆತ್ಮಹತ್ಯೆ ಆಯಿತು. ಅವರಿಗೆ ಯಾವುದನ್ನು ತಡೆಯಲು ಆಗಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಮೈಸೂರು ವಸ್ತು ಪ್ರದರ್ಶನದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಯಾವುದನ್ನು ತಡೆಯಲು ಆಗಲಿಲ್ಲ. ಆಡಳಿತವನ್ನೇ ಸರಿಯಾಗಿ ನಡೆಸಲಿಲ್ಲ, ಅದು ನರಹಂತಕ ಸರ್ಕಾರ. ಸಿದ್ದರಾಮಯ್ಯ ನರಹಂತಕ ಸರ್ಕಾರದ ಮುಖ್ಯಮಂತ್ರಿಯಾಗಿದ್ದರು ಎಂದು ಆಪಾದಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದಾಗ ಹೆಚ್ಚು ಕೊಡುಗೆ : ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನಳಿನ್ ಕುಮಾರ್ ವೀರಪ್ಪನ್ಗೆ ಹೋಲಿಕೆ ಮಾಡಿದರು. ಸಿದ್ದರಾಮಯ್ಯ ಅವರು ತಮ್ಮ ಆಡಳಿತಾವಧಿಯಲ್ಲಿ ಮೈಸೂರಿಗೆ ಏನು ಕೊಡುಗೆ ನೀಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗ ಅತಿ ಹೆಚ್ಚು ಕೊಡುಗೆ ನೀಡಲಾಗಿದೆ. ಈ ವಿಚಾರವಾಗಿ ಶ್ವೇತಪತ್ರದೊಂದಿಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಈಶ್ವರಪ್ಪ ರಾಕ್ಷಸ ಪ್ರವೃತ್ತಿ ಮನುಷ್ಯ.. 40% ಕಮೀಷನ್ ಪಡೆಯೋ ಬಿಜೆಪಿಯವ್ರು ರಾಕ್ಷಸ್ರೋ, ಮನುಷ್ಯರೋ.. ಸಿದ್ದರಾಮಯ್ಯ
ಕಾಂಗ್ರೆಸ್ನವರಿಗೆ ಮಾತನಾಡುವ ನೈತಿಕತೆ ಇಲ್ಲ. ಅವರ ರಾಷ್ಟ್ರೀಯ ಮತ್ತು ರಾಜ್ಯ ನಾಯಕರುಗಳೆಲ್ಲಾ ಬೇಲ್ನಲ್ಲಿದ್ದಾರೆ. ಏನ್ ಸ್ವತಂತ್ರ ಹೋರಾಟ ಮಾಡಿ ಬೇಲ್ ಮೇಲಿಲ್ಲ. ಭ್ರಷ್ಟಾಚಾರದ ಆರೋಪದ ಮೇಲೆ ಅವರು ಬೇಲ್ ಪಡೆದಿದ್ದಾರೆ. ಹಿಂದೆ ಕೋರ್ಟ್ನಲ್ಲಿ ಚೂರಿ ಚಿಕ್ಕಣ್ಣ ಬಾ, ಕೋಳಿ ಫಯಾಜ್ ಬಾ ಅಂತಾ ಕರೆಯುತ್ತಿದ್ರು. ಈಗ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಾ, ಚಿದಂಬರಂ ಬಾ ಅಂತಾ ಕರೆಯುತ್ತಾರೆ ಎಂದು ವ್ಯಂಗ್ಯವಾಡಿದರು.
ಚಾಮುಂಡೇಶ್ವರಿ ಆಶೀರ್ವಾದ ಇದೆ : ನನಗೆ ಬಹಳ ಹೆಮ್ಮೆ ಇದೆ. ಬಿಜೆಪಿ ನಾಯಕರ ಮೇಲೆ ಯಾವ ಭ್ರಷ್ಟಾಚಾರದ ಆರೋಪ ಇಲ್ಲ. ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡು 7 ವರ್ಷವಾಯಿತು. ಅವರ ಮೇಲೆ ಒಂದು ಕಪ್ಪುಚುಕ್ಕೆ ಇಲ್ಲ. ಮುಂದಿನ ಚುನಾವಣೆಯಲ್ಲಿ 150 ಸೀಟು ಗೆಲ್ಲಲು ಹೊರಟಿದ್ದೇವೆ. ನಮಗೆ ವರುಣಾ ದೇವನ ಆಶೀರ್ವಾದವಿದೆ. ಚಾಮುಂಡೇಶ್ವರಿ ಆಶೀರ್ವಾದ ಕೂಡ ಇದೆ. ನಾವು ಮುಂದೆ 150 ಸೀಟು ಗೆಲ್ಲುತ್ತೇವೆ ಎಂದರು.
ಸಿದ್ದರಾಮಯ್ಯ ಹಗಲಿನಲ್ಲಿ ಟೀಕೆ ಮಾಡ್ತಾರೆ : ಸಿದ್ದರಾಮಯ್ಯ ಅವರು ಹಗಲೊತ್ತು ಟೀಕೆ ಮಾಡುತ್ತಾರೆ. ಆದರೆ, ರಾತ್ರಿ ಹಿಡಿಯುತ್ತಾರೆ. ಕೋವಿಡ್ ಸಂದರ್ಭದಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಅಂದರು. ಆದರೆ, ರಾತ್ರೋರಾತ್ರಿ ಅವರೇ ವ್ಯಾಕ್ಸಿನ್ ಹಾಕಿಸಿಕೊಂಡರು ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ- ಡಿಕೆಶಿ ಶಪಥ : ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಸೋಲಿಸಲು ಪ್ಲ್ಯಾನ್ ಮಾಡಿದ್ದಾರೆ. ಇತ್ತ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೋಲಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಸೋಲಿಸಲು ಶಪಥ ಮಾಡಿದ್ದಾರೆ ಎಂದು ಕುಟುಕಿದರು.