ಮೈಸೂರು:ಗೋ ಮಾಂಸ ತಿನ್ನುವುದೇ ನಮ್ಮ ಸಾಧನೆ ಎಂದು ಹೇಳುವ ಮೈಸೂರಿನ ಮುಖಂಡ ಸಿದ್ದರಾಮಯ್ಯ ಅವರ ಬಗ್ಗೆ ನಾವು ಮಾತನಾಡುವುದು ಶೋಭೆ ತರುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಇಂದು ಜನ ಸೇವಕ ಸಮಾವೇಶದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ನಾನು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲಿದೆ ? ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇಲ್ಲ. ಆದ್ದರಿಂದ ಅವರ ಬಗ್ಗೆ ಮಾತನಾಡುವುದಿಲ್ಲ ಎಂದರು. ನನ್ನನ್ನ ಬೇಕೆಂತಲೆ ಕೆಣಕುತ್ತಿದ್ದಾರೆ, ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಇದರ ಬಗ್ಗೆ ಉತ್ತರ ನೀಡುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 140 ರಿಂದ 150 ಸ್ಥಾನ ಗೆಲ್ಲುವುದೇ ನಮ್ಮ ಗುರಿ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಜನ ಸೇವಕ ಸಮಾರಂಭದ ಬಗ್ಗೆ ಸಿಎಂ ಹೇಳಿದ್ದೇನು?
ಜನಸೇವಕ ಕಾರ್ಯಕ್ರಮ ಒಂದು ಅಪರೂಪದ ಕಾರ್ಯಕ್ರಮ. ಇಂದು ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಈ ಸಮಾವೇಶ ಮುಂದಿನ ತಾ.ಪಂ ಹಾಗೂ ಜಿ.ಪಂ ಚುನಾವಣೆಗೆ ದಿಕ್ಸೂಚಿ. ನಮ್ಮೆಲ್ಲ ಕಾರ್ಯಕರ್ತರ ಶ್ರಮದಿಂದ ಗ್ರಾ.ಪಂ ಚುನಾವಣೆಯಲ್ಲಿ ಹೆಚ್ಚು ಮಂದಿ ಆಯ್ಕೆಯಾಗಿದ್ದೇವೆ ಎಂದು ಹೈಕಮಾಂಡ್ನ ನಾಯಕರಿಗೆ ತಿಳಿಸಿದಾಗ ನಮ್ಮ ನಾಯಕರು ಖುಷಿ ಪಟ್ಟರು ಎಂದರು.
ಚುನಾವಣೆಯಲ್ಲಿ ಗೆದ್ದಿರುವ ಹೆಣ್ಣು ಮಕ್ಕಳೇ, ಮನೆಯ ಜವಾಬ್ದಾರಿ ಜೊತೆಗೆ ನಿಮ್ಮ ಗ್ರಾಮದ ಜವಾಬ್ದಾರಿ ನಿಮಗಿದೆ. ಈ ದೇಶದ ಪ್ರಧಾನಿ ಮೋದಿ ಒಂದು ದಿನವೂ ವಿಶ್ರಾಂತಿ ಪಡೆಯದೆ ಹಗಲು ರಾತ್ರಿ ದುಡಿಯುತ್ತಾರೆ, ಅವರೇ ನಮಗೆ ಆದರ್ಶ. ನೀವು ನಾಳಿನ ಪಕ್ಷದ ಚಿಹ್ನೆಯಲ್ಲಿ ಬರುವ ಚುನಾವಣೆಯಲ್ಲಿ ಬಹುಮತ ಪಡೆದಾಗ ಮಾತ್ರ ನೀವು ಆಯ್ಕೆಯಾಗಿದ್ದು ಸಾರ್ಥಕವಾಗುತ್ತೆ ಎಂದರು. ಒಬ್ಬ ಸಣ್ಣ ಕಾರ್ಯಕರ್ತ ಈ ರಾಜ್ಯದ ಮುಖ್ಯಮಂತ್ರಿ ಆಗ್ತಾನೆ ಅಂತ ಯಾರೂ ನಂಬಿರಲಿಲ್ಲ ಅದಕ್ಕೆ ನಾನೇ ಸಾಕ್ಷಿ. ಜನ ಮೆಚ್ಚುವ ಕೆಲಸ ನಿಮ್ಮಿಂದಾಗಬೇಕು ಎಂದರು.
ಕಾಂಗ್ರೆಸ್ನವರು ನಮ್ಮ ಕೆಣಕುವ ಕೆಲಸ ಮಾಡ್ತಾರೆ. ಆದರೆ ಅದಕ್ಕೆಲ್ಲ ನಮ್ಮ ಸಾಧನೆಯೇ ಉತ್ತರ ನೀಡಲಿದೆ. ನಿಮ್ಮ ಶ್ರಮದ ಆಧಾರದ ಮೇಲೆ ಪಕ್ಷದ ಗೆಲುವು ಸಾಧ್ಯ. ಮೈಸೂರು ಚಾಮರಾಜನಗರ ಜಿಲೆಗಳಲ್ಲಿ ಪಕ್ಷ ಮತ್ತಷ್ಟು ಸದೃಢವಾಗಬೇಕಿದೆ. ಇನ್ನು ಎರಡು ಹೆಜ್ಜೆ ಮುಂದೆ ಸಾಗಬೇಕಿದೆ. ಗುರಿ ಮುಟ್ಟುವ ಕಡೆ ಸಾಗೋಣ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ:ಮಹಿಳೆಯರಿಂದ 16,000 ಕಿ.ಮೀ. ತಡೆರಹಿತಿ ಫ್ಲೈಟ್ ಚಾಲನೆ: ನೀವು ದೇಶದ ಹೆಮ್ಮೆ- ರಾಹುಲ್ ಗಾಂಧಿ