ಮೈಸೂರು: ಹುಣಸೂರನ್ನು ಮಾರಾಟ ಮಾಡಲ್ಲ ಅಭಿವೃದ್ಧಿ ಮಾಡಿ ತೋರಿಸುವೆ ಎಂದು ಅನರ್ಹ ಶಾಸಕ ಹಾಗೂ ಪ್ರಸ್ತುತ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಹುಣಸೂರು ಪಟ್ಟಣದಲ್ಲಿರುವ ದಿವಂಗತ ದೇವರಾಜ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಯಾವ ಮುಖ ಇಟ್ಕೊಂಟು ಜನರ ಬಳಿ ವಿಶ್ವನಾಥ್ ಮತ ಕೇಳುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹುಣಸೂರು ಅಭಿವೃದ್ಧಿಗಾಗಿ ಓಟು ಕೇಳುವೆ. ಇಲ್ಲಿ ಗೆದ್ದ ನಂತರ ಆರು ತಾಲೂಕು ಸೇರಿಸಿ ದೇವರಾಜ ಅರಸು ಜಿಲ್ಲೆ ಮಾಡಲು ಸರ್ಕಾರಕ್ಕೆ ಒತ್ತಾಯಿಸುವೆ. ಇದರ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ ಎಂದರು.
ಹುಣಸೂರಿನಲ್ಲಿ 10 ವರ್ಷ ಶಾಸಕನಾಗಿದ್ದ ಮಂಜುನಾಥ್ ಅವರಿಗೆ ಅಭಿವೃದ್ಧಿಯ ಕನಸು ಇಲ್ಲ. ಅವರಿಗೆ ಅಭಿವೃದ್ಧಿ ಬೇಕಿಲ್ಲ ಎಂದು ಕುಟುಕಿದರು. ಮೈಸೂರಲ್ಲಿ ಸಿ.ಪಿ.ಯೋಗೇಶ್ವರ್, ಮೋದಿ, ಅಮಿತ್ ಶಾ ಭಾವಚಿತ್ರವಿರುವ ಸೀರೆ ಸಿಕ್ಕಿರುವ ವಿಚಾರಕ್ಕೆ ಉತ್ತರಿಸಿದ ವಿಶ್ವನಾಥ್, ಇದನ್ನು ಯಾರು ಮಾಡಿದ್ದಾರೋ ಗೊತ್ತಿಲ್ಲ. ಆದರೆ ಈ ಬಗ್ಗೆ ಚುನಾವಣಾಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದರು.