ಮೈಸೂರು: ಡಿಸೆಂಬರ್ 6ರ ಬಳಿಕ ನನ್ನ ಮನಸ್ಸಿನ ಭಾವನೆಗಳನ್ನು ಹೇಳುತ್ತೇನೆ. ಹೈಕಮಾಂಡ್ ಸೂಚನೆಯನ್ನು ತಲೆಮೇಲೆ ಹೊತ್ತು ದುಡಿಮೆ ಮಾಡಿದ ನನಗೆ ಯಾವ ರೀತಿ ಹೊಡೆತ ಆಯಿತು ಎಂಬುದನ್ನು ವಿವರಿಸುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಚಾಮರಾಜನಗರಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಹೋಗುವ ಮುನ್ನ ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮ್ಮ ಮುಂದಿನ ರಾಜಕೀಯ ನಡೆಯ ಕುರಿತ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಡಿಸೆಂಬರ್ 6ರ ತರುವಾಯ ನನ್ನ ಮನಸ್ಸಿನ ಭಾವನೆಯನ್ನು ಹೇಳುತ್ತೇನೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿರುವ ಮಾತಿಗೆ ನನ್ನ ಸಹಮತವಿದೆ. ನಮ್ಮ ಪಕ್ಷದಲ್ಲಿ ಒಂದು ರೀತಿಯ ಸೋಮನಹಳ್ಳಿ ಮುದುಕಿಯ ಕಥೆಯಂತಾಗಿದೆ ಎಂದರು.
ಇದನ್ನೂ ಓದಿ: ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ಸ್ವಯಂಕೃತ ಅಪರಾಧದಿಂದ ನನ್ನ ಕಾಲ ಮೇಲೆ ನಾನೇ ಕಲ್ಲು ಹಾಕಿಕೊಂಡಿದ್ದೇನೆ : ವಿ. ಸೋಮಣ್ಣ
ಹೈಕಮಾಂಡ್ ಸೂಚನೆಯ ಮೇರೆಗೆ ತಲೆಯ ಮೇಲೆ ಜವಾಬ್ದಾರಿ ಹೊತ್ತುಕೊಂಡು ದುಡಿಮೆ ಮಾಡಿದೆ. ಆ ನಂತರ ನನಗೆ ಯಾವ ರೀತಿ ಹೊಡೆತ ಬಿತ್ತು ಎಂಬುದನ್ನು ಬಿಡಿಬಿಡಿಯಾಗಿ ವಿವರಿಸುತ್ತೇನೆ. ರಾಜಕೀಯ ದೊಂಬರಾಟ ಅಲ್ಲ, ಇದು ಯಾವುದೇ ಮನೆತನಕ್ಕೆ ಸೀಮಿತವೂ ಅಲ್ಲ. ರಾಜಕಾರಣ ಎನ್ನುವುದು ನಾಟಕದ ಕಂಪನಿ ಕೂಡ ಅಲ್ಲ. ಒಳ ಒಪ್ಪಂದಕ್ಕೆ ಸೀಮಿತವಾಗಿಲ್ಲ ಎಂದು ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.
ಇದನ್ನೂ ಓದಿ: ಒಂದೇ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ, ಬೊಮ್ಮಾಯಿ, ಸೋಮಣ್ಣ
ಯಡಿಯೂರಪ್ಪ ತಮ್ಮನ್ನು ಸಂಪರ್ಕಿಸಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೋಮಣ್ಣ, "ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಆ ರೀತಿಯ ಯಾವ ಪ್ರಯತ್ನವೂ ನಡೆದಿಲ್ಲ ಎಂದು ಹೇಳಿ ಖಾಸಗಿ ಕಾರ್ಯಕ್ರಮಕ್ಕಾಗಿ ಚಾಮರಾಜನಗರಕ್ಕೆ ಹೊರಟರು.
ಇದನ್ನೂ ಓದಿ: ವಿ .ಸೋಮಣ್ಣ ಕಾಂಗ್ರೆಸ್ ಸೇರಿದರೆ ನಮ್ಮದೇನು ತಕರಾರಿಲ್ಲ : ಸಚಿವ ಡಾ. ಜಿ. ಪರಮೇಶ್ವರ್