ಮೈಸೂರು: ಅಪ್ಪಾಜಿ ಕಟ್ಟಿದ ಶಕ್ತಿಧಾಮಕ್ಕೆ ಯುಕ್ತಿಯಾಗಿ ನಿಲ್ಲುತ್ತೇನೆ. ನಮಗೆ ದುಃಖ ಆದಾಗಲೆಲ್ಲಾ ಶಕ್ತಿಧಾಮಕ್ಕೆ ಬರ್ತೀವಿ. ಅಪ್ಪುನ ಈ ಮಕ್ಕಳಲ್ಲಿ ನೋಡ್ತೀವಿ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ಶಕ್ತಿಧಾಮದಲ್ಲಿ ಏರ್ಪಡಿಸಿದ್ದ ಇನ್ಫೋಸಿಸ್ ಫೌಂಡೇಶನ್ ಬ್ಲಾಕ್ ಕಟ್ಟಡ ಲೋಕಾರ್ಪಣೆ ಹಾಗೂ ಶಕ್ತಿಧಾಮದ ವಿದ್ಯಾಶಾಲಾ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಇಲ್ಲಿನ ಮಕ್ಕಳಲ್ಲಿ ಕೆಲವರು ಅಣ್ಣ ಅನ್ನುತ್ತಾರೆ, ಕೆಲವರು ಅಪ್ಪ ಅನ್ನುತ್ತಾರೆ. ನನ್ನ ಉಸಿರು ಇರೋವರೆಗೂ ಶಕ್ತಿಧಾಮ ಬಿಡಲ್ಲ. ಶಕ್ತಿಧಾಮದಕ್ಕೆ ಕಟ್ಟಡ ಕಟ್ಟಿಸಿಕೊಟ್ಟ ಸುಧಾಮೂರ್ತಿ ಸಹಕಾರ ದೊಡ್ಡದು. ಬೊಮ್ಮಾಯಿ ಸರ್ ಕಾಮನ್ ಮ್ಯಾನ್. ನಾನು ಯಾವತ್ತೂ ಇಂತ ಸಿಎಂ ನೋಡಲಿಲ್ಲ. ಹಾಗಂತ ನಾನು ಈ ಹಿಂದೆ ಸಿಎಂ ಆದವರು ಸರಿ ಇಲ್ಲ ಅಂತ ಹೇಳುತ್ತಿಲ್ಲ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ಬೊಮ್ಮಾಯಿಯವರು ತುಂಬಾ ಸಿಂಪಲ್. ನಮ್ಮ ಕುಟುಂಬದ ಮೇಲೆ ಅಪಾರ ಗೌರವ ಇಟ್ಟಿದ್ದಾರೆ. ಅಪ್ಪು ಅಂತ್ಯಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು. ಭಾವನೆಗಳನ್ನು ಡ್ರಾಮಾದ ಮೂಲಕ ತೋರಿಸಲು ಸಾಧ್ಯವಿಲ್ಲ. ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಅವರ ಸಹಾಯ ಇರುತ್ತೆ ಎಂದು ಭಾವಿಸಿದ್ದೇನೆ ಎಂದು ಶಿವರಾಜ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ರಾಮ ರಥಯಾತ್ರೆ: 'ಸರ್ವಧರ್ಮೀಯರಿಗೂ ವ್ಯಾಪಾರಕ್ಕೆ ಅವಕಾಶ'
ಶಕ್ತಿಧಾಮದ ಅಧ್ಯಕ್ಷೆ ಗೀತಾ ಶಿವರಾಜ್ ಕುಮಾರ್ ಮಾತನಾಡಿ, ಅಮ್ಮ ಪಾರ್ವತಮ್ಮನ ಆಶಯದಂತೆ ಕೆಂಪಯ್ಯ ಮಾಮ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ರು. ಶಕ್ತಿಧಾಮ ಆಗಲು ಕೆಂಪಯ್ಯ ಮಾಮ ಮುಖ್ಯ ಕಾರಣ. ಅತ್ತೆ ಮಾವ ಜೊತೆ ಕೈ ಜೋಡಿಸಿ ಶಕ್ತಿಧಾಮ ಕಟ್ಟಿದ್ದಾರೆ. ಅವರು ಇಂದು ಶಕ್ತಿಧಾಮದ ಅಧ್ಯಕ್ಷರಾಗಬೇಕಿತ್ತು. ಇಂದು ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿ ಸಲಹೆ ಸಹಕಾರ ನೀಡುತ್ತಿದ್ದಾರೆ. ಅದರಂತೆ ಸರ್ಕಾರ ಕೂಡ ನಮಗೆ ಸಹಕಾರ ನೀಡಿದೆ.
ಸಿದ್ದರಾಮಯ್ಯನವ್ರು ಐದು ಕೋಟಿ ಅನುದಾನ ಕೊಟ್ಟಿದ್ದಾರೆ. ಈಗಿನ ಮುಖ್ಯಮಂತ್ರಿಗಳು ನಮ್ಮ ಶಕ್ತಿಧಾಮದ ಕೆಲಸಗಳನ್ನು ಮಾಡಿಕೊಡಬೇಕು. ಅದರಂತೆ ಚಿತ್ರ ನಿರ್ಮಾಪಕರು ಕೂಡ ನೆರವು ನೀಡಿದ್ದಾರೆ. ಅವರೆಲ್ಲರಿಗೂ ನಾನು ಯಾವತ್ತೂ ಆಭಾರಿಯಾಗಿರುತ್ತೇನೆ ಎಂದರು.