ಮೈಸೂರು : ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಆಗಮಿಸಿದ ನನಗೆ ಮಸಿ ಬಳಿಯುವುದಾಗಿ ಕೆಲವರು ಹೇಳಿದ್ದರು. ಮಸಿ ಬಳಿಯುವುದಲ್ಲ, ಕೊಲೆ ಮಾಡಿದ್ರೂ ನನ್ನ ಹೋರಾಟ ನಿಲ್ಲಲ್ಲ. ಕನ್ನಡ ಹೋರಾಟ, ಜನಸಾಮಾನ್ಯರ ಹೋರಾಟಕ್ಕೆ ನಾನು ಬಂದೇ ಬರುತ್ತೇನೆ. ಆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಪತ್ರಕರ್ತ, ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಟಾಂಗ್ ನೀಡಿದ್ದಾರೆ.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಚಳವಳಿ ಕೇಂದ್ರ ಸಮಿತಿ ವತಿಯಿಂದ ಏರ್ಪಡಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಸಹೋದರಿ ಗೌರಿ ಲಂಕೇಶ್ ಹೋರಾಟ ಮಾಡುತ್ತಲೇ ಕೊಲೆಯಾಗಿ ಹೋದಳು.
ನಾನು ಸಹ ಹೋರಾಟ ಮಾಡಿಕೊಂಡು ಬಂದವನು. ನನಗೆ ಮಸಿ ಬಳಿಯುವುದಿರಲಿ, ಕೊಲೆ ಮಾಡುತ್ತೇನೆಂದು ಬೆದರಿಸಿದರೂ ಹೆದರುವುದಿಲ್ಲ. ಹಾಗಾಗಿಯೇ, ಕಾರ್ಯಕ್ರಮಕ್ಕೆ ಆಗಮಿಸಿ ಪಾಲ್ಗೊಂಡಿದ್ದೇನೆ ಎಂದರು.
ನಾನು ಅನ್ಯಾಯದ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದವನು. ರಾಜ್ಯದ ಯಾವುದೇ ಭಾಗದಲ್ಲಿ ಅನ್ಯಾಯವಾದರೂ ಹೋಗಿ ಹೋರಾಟ ಮಾಡಿದ್ದೇನೆ. ಕೋಮುವಾದದ ವಿರುದ್ಧ ಹೋರಾಡುತ್ತಿದ್ದೇನೆ. ತುಳಿತಕ್ಕೊಳಗಾದವರ ಪರವಾಗಿ ಧ್ವನಿ ಎತ್ತಿದ್ದೇನೆ. ಕೊರೊನಾದಿಂದ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಕೋವಿಡ್ ಸಂದರ್ಭದಲ್ಲಿ ನಟ ಪುನೀತ್ ರಾಜಕುಮಾರ್ ರಾಜ್ಯ ಸರ್ಕಾರಕ್ಕೆ 50 ಲಕ್ಷ ರೂಪಾಯಿ ನೆರವಿನ ರೂಪದಲ್ಲಿ ಚೆಕ್ ನೀಡಿದರು. ಇದರ ನಡುವೆಯೂ ಚಿತ್ರರಂಗದಲ್ಲಿ ದುಡಿಯುತ್ತಿರುವ ಕಲಾವಿದರು, ಕಾರ್ಮಿಕರು ತೀವ್ರ ತೊಂದರೆ ಎದುರಿಸಿದರು. ಆ ವೇಳೆ ನಾನು ಸಹ ನನ್ನ ಕೈಲಾದ ಸಹಾಯ ಮಾಡಿದೆ ಎಂದರು.
ಗೋಕಾಕ್ ಚಳವಳಿ, ದಲಿತ ಪರ ಚಳವಳಿ, ರೈತ ಪರ ಚಳವಳಿ ಆರಂಭವಾಗಿದ್ದೇ ಲಂಕೇಶ್ ಪತ್ರಿಕೆಯ ಬರವಣಿಗೆಗಳಿಂದ. ಇತ್ತೀಚೆಗೆ ಹಿಂದಿ ಭಾಷೆಯನ್ನು ಹೇರಲಾಗುತ್ತಿದೆ. ಕನ್ನಡ ಧ್ವಜವನ್ನು ಸುಡಲಾಗಿದೆ.
ಕನ್ನಡಕ್ಕೆ ಧಕ್ಕೆಯಾದಾಗ ನಟ-ನಟಿಯರು ಒಂದು ಟ್ವೀಟ್ ಮಾಡಿ ಸುಮ್ಮನಾಗಬಾರದು. ಟ್ವೀಟ್ ಮಾಡುವ ಬದಲು ಹೋರಾಟಕ್ಕೆ ಧುಮುಕಬೇಕು ಎಂದು ಕರೆ ನೀಡಿದರು.
ಇವತ್ತು ನಾಯಕತ್ವದ ಕೊರತೆಯಿದೆ. ಕನ್ನಡ ಪರ ಹೋರಾಟಕ್ಕೆ ನಾಯಕತ್ವದ ಕೊರತೆಯಿದೆ. ಕನ್ನಡದ ಹಿರಿಯ ನಟ ಶಿವರಾಜ್ಕುಮಾರ್ ಹೋರಾಟದ ನೇತೃತ್ವವಹಿಸಿದರೆ ಸೂಕ್ತ.
ಈಗ ಮತ್ತೊಮ್ಮೆ ಕನ್ನಡ ಪರ ಹೋರಾಟ ಆರಂಭವಾಗಬೇಕಿದೆ. ಈಗ ಎಲ್ಲರೂ ಬೀದಿಗಿಳಿದು ಕನ್ನಡ ಪರ ಹೋರಾಟ ಮಾಡಬೇಕು.ಕೇವಲ ಟ್ವೀಟ್ ಮುಖಾಂತರ ಹೋರಾಟ ನಡೆಸಲು ಸಾಧ್ಯವಿಲ್ಲ ಎಂದರು.