ಮೈಸೂರು: ಯಡಿಯೂರಪ್ಪನವರು ಬೋರ್ಡ್ ಚೇರ್ಮನ್ಗಳ ಆಯ್ಕೆಯನ್ನು ಅಷ್ಟೊಂದು ಸಮರ್ಪಕವಾಗಿ ಮಾಡಿಲ್ಲ ಈ ಬಗ್ಗೆ ನನಗೆ ಅತೃಪ್ತಿ ಇದೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಮತ್ತೊಮ್ಮೆ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ವಿರುದ್ಧ ನನಗೆ ಅಸಮಾಧಾನ ಎನ್ನುವುದಕ್ಕಿಂತ ಇರುವುದನ್ನು ಹೇಳಿದೆ ಅಷ್ಟೇ ಎಂದರು. ಶಾಸಕರು ಮಂತ್ರಿಯಾಗದವರು ಬೋರ್ಡ್ ಚೇರ್ಮನ್ಗಳಾಗಿದ್ದಾರೆ. ಅದು ಸರಿ, ಆದರೆ ಕೆಲವು ನಿಗಮ ಮಂಡಳಿಯ ನೇಮಕಾತಿ ಮಾಡುವುದರಲ್ಲಿ ಯಡಿಯೂರಪ್ಪ ನವರು ಸರಿಯಾಗಿ ಮಾಡಲಿಲ್ಲ, ಸ್ವಲ್ಪ ಗೊಂದಲ ಮಾಡಿಕೊಂಡರು, ಯೋಚನೆ ಮಾಡಿ, ಚರ್ಚೆ ಮಾಡಲಿಲ್ಲ, ಇದರ ಬಗ್ಗೆ ಸಿಎಂ ವಿರುದ್ಧ ನನಗೆ ಅತೃಪ್ತಿ ಇದೆ ಎಂದರು.
ಇನ್ನು ಸಿಎಂ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ , ರಾಷ್ಟ್ರೀಯ ಪಕ್ಷ ಬಿಜೆಪಿ ಕೇಂದ್ರ ನಾಯಕರು ಇದರ ಬಗ್ಗೆ ತೀರ್ಮಾನ ಮಾಡುತ್ತಾರೆ. ಯಡಿಯೂರಪ್ಪ ನವರು ಮಂತ್ರಿ ಮಂಡಲ ವಿಸ್ತರಣೆ ಮಾಡುವ ಬಗ್ಗೆ ಕೇಂದ್ರ ನಾಯಕರ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಮುಖ್ಯಮಂತ್ರಿ ಅಂದ ಮೇಲೆ ಸ್ವಲ್ಪ ಒತ್ತಡ ಇದ್ದೇ ಇರುತ್ತದೆ, ಸ್ವಲ್ಪ ತಾಳ್ಮೆ ವಹಿಸಬೇಕು. ಯಡಿಯೂರಪ್ಪ ಇತ್ತೀಚಿಗೆ ಬದಲಾಗಿದ್ದಾರೆ ಎಂಬ ಪ್ರಶ್ನೆಗೆ ಅಧಿಕಾರ ಬಂದಾಗ ಸ್ವಲ್ಪ ಬದಲಾವಣೆ ಆಗುವುದು ಸಹಜ ಎಂದ ಸಂಸದರು, ಸಿದ್ದರಾಮಯ್ಯ ಅವರಿಗೆ ಅಧಿಕಾರ ಇತ್ತು, ಆದರೆ ಬುದ್ದಿವಂತಿಕೆ ಇರಲಿಲ್ಲ , ಅಧಿಕಾರದ ಮದದಲ್ಲಿ ಮೈ ಮರೆತು ಚುನಾವಣೆ ಸೋತರು, ಆನಂತರ ಸಿದ್ದರಾಮಯ್ಯ ನವರ ಗತಿ ಏನಾಯಿತು ಎಂಬುದನ್ನು ನೆನಪಿಸಿಕೊಳ್ಳಬೇಕು, ಯಡಿಯೂರಪ್ಪ ನವರು ಮುಳ್ಳಿನ ಮೇಲೆ ಪಂಚೆ ಹಾಕಿದ್ದಾರೆ, ಅದನ್ನು ಮೆಲ್ಲನೆ ತೆಗೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಇನ್ನು ಉಪ ಚುನಾವಣೆ ಫಲಿತಾಂಶದ ನಂತರ ಯಡಿಯೂರಪ್ಪ ನವರಿಗೆ ಬಲ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸ್ ಪ್ರಸಾದ್, ರಾಜ್ಯದಲ್ಲಿ ವಿರೋಧ ಪಕ್ಷ ಕುಸಿದು ಹೋಗಿದೆ, ತಿಹಾರ್ ಜೈಲ್ ನಿಂದ ಬಂದವರನ್ನು ಪ್ರೆಸಿಡೆಂಟ್ ಮಾಡಿ ವೋಟ್ ಕೊಡಿ ಎಂದರೆ, ಯಾರು ವೋಟ್ ಕೊಡುತ್ತಾರೆ. 136 ವರ್ಷ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ಯಾವ ಮುಖ ಇಟ್ಟುಕೊಂಡು ವೋಟ್ ಕೇಳುತ್ತಾರೆ. ಆ ಪಕ್ಷದಲ್ಲಿ ನೈತಿಕತೆ ಹಾಳಾಗಿದೆ, ಕಾಂಗ್ರೆಸ್ ಪಕ್ಷದ ಈ ಸ್ಥಿತಿಯಿಂದ ಸಹಜವಾಗಿ ಆಡಳಿತ ನಡೆಸುವ ಬಿಜೆಪಿಗೆ ಸಹಾಯವಾಗಿದೆ ಅಷ್ಟೆ ಎಂದು ಶ್ರೀನಿವಾಸ್ ಪ್ರಸಾದ್ ಡಿ.ಕೆ.ಶಿವಕುಮಾರ್ ಅವರನ್ನು ತಿಹಾರ್ ಜೈಲ್ ನಿಂದ ಬಂದವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ ಎಂದು ಟೀಕಿಸಿದರು.