ಮೈಸೂರು/ಶಿವಮೊಗ್ಗ/ಕಲಬುರಗಿ/ರಾಯಚೂರು/ವಿಜಯಪುರ: ದೇಶಾದ್ಯಂತ ಇಂದು 'ನಾನು ಚೌಕಿದಾರ್' ಸಂವಾದವನ್ನು ಸಾವಿರಾರು ಬಿಜೆಪಿ ಕಾರ್ಯಕರ್ತರು ವೀಕ್ಷಿಸಿ ಖುಷಿಪಟ್ಟಿದ್ದಾರೆ. ಹಾಗೆಯೇ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲೂ ಸಂವಾದ ವೀಕ್ಷಣೆಗೆ ಬಿಜೆಪಿ ವ್ಯವಸ್ಥೆ ಮಾಡಲಾಗಿತ್ತು.
ಮೈಸೂರು, ಶಿವಮೊಗ್ಗ, ಕಲಬುರಗಿ, ರಾಯಚೂರು, ವಿಜಯಪುರದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಾವಿರಾರು ಕಾರ್ಯಕರ್ತರು ಸಂವಾದ ವೀಕ್ಷಣೆ ಮಾಡಿದರು.
ಮೈಸೂರು:
ಮೈಸೂರಿನಲ್ಲೂ ನಗರದ ವಿಶ್ವೇಶ್ವರ ನಗರದಲ್ಲಿರುವ ಖಾಸಗಿ ಕಲ್ಯಾಣ ಮಂಟಪದಲ್ಲಿ ಮೋದಿ ಅವರ ವಿಡಿಯೋ ಸಂವಾದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಸಂವಾದ ಆರಂಭಕ್ಕೂ ಮುನ್ನ ಶಾಸಕ ಸುರೇಶ್ ಕುಮಾರ್ ಕಾರ್ಯಕರ್ತರೊಡನೆ ಮಾತನಾಡಿದರು. ಪ್ರಧಾನಿ ಮೋದಿ ಅವರು ದೇಶಕ್ಕಾಗಿ ಚೌಕಿದಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸಲಹೆಯಂತೆ ಸ್ವಇಚ್ಛೆಯಿಂದ ಮುಖಂಡರು ಹಾಗೂ ಕಾರ್ಯಕರ್ತರು ಚೌಕಿದಾರರಾಗಿದ್ದೀವಿ. ದೇಶದ ಬದ್ಧತೆಗಾಗಿ ಹಾಗೂ ಅಭಿವೃದ್ಧಿಗಾಗಿ ಕೈಜೋಡಿಸೋಣವೆಂದು ಕರೆ ನೀಡಿದರು. ಬಳಿಕ ಮೋದಿಯೊಂದಿಗಿನ ಸಂವಾದವನ್ನು ವೀಕ್ಷಿಸಿದರು.
ಶಿವಮೊಗ್ಗ:
ಶಿವಮೊಗ್ಗದಲ್ಲೂ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಛೇಂಬರ್ ಆಫ್ ಕಾಮರ್ಸ್ ಕಟ್ಟಡದಲ್ಲಿ ಸಂವಾದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ನಾನು ಚೌಕಿದಾರ್ ಅಭಿಯಾನದ ಜಿಲ್ಲಾ ಸಂಚಾಲಕರಾದ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ದೇಶಕ್ಕಾಗಿ ದುಡಿಯುವ ಪ್ರತಿಯೊಬ್ಬ ಪ್ರಜೆಯು ಚೌಕಿದಾರನು. ಹಾಗಾಗಿ ದೇಶದ ರಕ್ಷಣೆ ಅದರ ಬಲವರ್ಧನೆಗೆ ಎಲ್ಲರ ಸಹಕಾರ ಮುಖ್ಯ ಆ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ನಮ್ಮ ದೇಶವನ್ನ ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ರುದ್ರೇಗೌಡ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಅರುಣ್ , ಹಾಗೂ ಪಕ್ಷದ ಮುಖಂಡರು, ವಿದ್ಯಾರ್ಥಿಗಳು ಭಾಗಿಯಾಗಿ ಮೋದಿಯವರ ವಿಡಿಯೋ ಸಂವಾದ ಕಾರ್ಯಕ್ರಮ ವೀಕ್ಷಿಸಿದರು.
ಕಲಬುರಗಿ:
ಹಾಗೆಯೇ ಕಲಬುರಗಿಯಲ್ಲಿ ನಗರದ ಪ್ರತಿಷ್ಠಿತ ದೊಡ್ಡಪ್ಪ ಅಪ್ಪ ಕಾಲೇಜಿನ ಸಭಾ ಮಂಟಪದಲ್ಲಿ ಈ ಸಂವಾದ ಹಮ್ಮಿಕೊಳ್ಳಲಾಗಿತ್ತು. ಈ ವಿಡಿಯೋ ಕಾನ್ಫರೆನ್ಸ್ನಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು. ಸಾರ್ವಜನಿಕರು, ಸೆಕ್ಯೂರಿಟಿ ಗಾರ್ಡ್ಗಳು ಭಾಗವಹಿಸಿದ್ದರು. ಬಿಜೆಪಿಯ ಅಭ್ಯರ್ಥಿ ಉಮೇಶ್ ಜಾಧವ್, ಮಾಜಿ ಸಚಿವ ಲಕ್ಷ್ಮಣ ಸವದಿ, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್,ಬಸವರಾಜ್ ಮತ್ತಿಮೂಡ್, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಭಾಗವಹಿಸಿ ಪ್ರಧಾನಿ ಮೋದಿ ಅವರ ಭಾಷಣ ಆಲಿಸಿದರು.ಇದೇ ವೇಳೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕುರಿತು ಸಂಕಲ್ಪ ಕೈಗೊಂಡರು.
ರಾಯಚೂರು:
ಇನ್ನು ರಾಯಚೂರಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ ಪ್ರಧಾನಿ ಮೋದಿ ಅವರ ಜೊತೆ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿಯ ಮಾಜಿ ಎಮ್ಎಲ್ಸಿ ಶಶಿಲ್ ನಮೋಶಿ, ಎನ್. ಶಂಕ್ರಪ್ಪ, ಮಾಜಿ ಶಾಸಕ ಎ.ಪಾಪಾರೆಡ್ಡಿ ,ನಗರಾಧ್ಯಕ್ಷ ಯು.ದೊಡ್ಡಮಲ್ಲೇಶ ಸೇರಿದಂತೆ ಮಹಿಳಾ ಹಾಗೂ ವಿವಿಧ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಂವಾದದಲ್ಲಿ ಬೆಂಗಳೂರಿನಿಂದ ಐಟಿ ಬಿಟಿಯ ಹರೀಶ್ ಪ್ರಸಾದ್ ಎಂಬುವರು ಪ್ರಧಾನಿ ಮೋದಿ ಅವರಿಗೆ ಪ್ರಶ್ನೆ ಕೇಳಿದಾಗ ಎಲ್ಲರೂ ಖುಷಿಯಿಂದ ತೀಕ್ಷ್ಣವಾಗಿ ವೀಕ್ಷಿಸಿ ಚಪ್ಪಾಳೆ, ಶಿಳ್ಳೆ ಹಾಕಿ ಸಂತಸ ವ್ಯಕ್ತಪಡಿಸಿದರು.
ವಿಜಯಪುರ:
ವಿಜಯಪುರದಲ್ಲೂ ಮೈ ಭಿ ಚೌಕಿದಾರ ಕಾರ್ಯಕ್ರಮ ವೀಕ್ಷಿಸಲು ಜಿಲ್ಲಾ ಬಿಜೆಪಿ ಬೃಹತ್ ಟಿವಿ ಪರದೆ ಅಳವಡಿಸಿತ್ತು. ನಗರದ ಗಚ್ಚಿ ಭವನದಲ್ಲಿ ಸಂವಾದ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಅಪ್ಪು ಪಟ್ಟಣಶೆಟ್ಟಿ ಸೇರಿದಂತೆ ಬಿಜೆಪಿ ನಾಯಕರು, ಕಾರ್ಯಕರ್ತರು ಭಾಗಿಯಾಗಿದ್ದರು. ಮೋದಿ ಸಂವಾದ ವೀಕ್ಷಿಸಲು ಮೋದಿ ಅಭಿಮಾನಿಗಳು ಚೌಕಿದಾರ ವೇಷ ತೊಟ್ಟು ಆಗಮಿಸಿದ್ದು ಗಮನ ಸೆಳೆಯಿತು.