ಮೈಸೂರು: ದಾಂಪತ್ಯ ಕಲಹದಿಂದ ಕೋಪಗೊಂಡಿರುವ ಪತಿಯೋರ್ವ ಮಗುವಿನೊಂದಿಗೆ ನೀರಿನ ಟ್ಯಾಂಕ್ಗೆ ಹತ್ತಿ ಆತ್ಮಹತ್ಯೆ ಬೆದರಿಕೆ ಹಾಕಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಈ ವ್ಯಕ್ತಿಯನ್ನು ಕೃಷ್ಣಮೂರ್ತಿ ಎಂದು ಗುರುತಿಸಲಾಗಿದೆ.
ಕೃಷ್ಣಮೂರ್ತಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ದಂಪತಿಯ ನಡುವೆ ಆಗಾಗ್ಗೆ ಜಗಳ ನಡೆಯುತಿತ್ತು ಎಂದು ತಿಳಿದುಬಂದಿದೆ. ಇದರಿಂದ ಬೇಸತ್ತ ಕೃಷ್ಣಮೂರ್ತಿ ತನ್ನ ಎರಡು ವರ್ಷ ಮಗುವಿನೊಂದಿಗೆ ನೀರಿನ ಟ್ಯಾಂಕ್ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.
ಕಳೆದ ಕೆಲವು ತಿಂಗಳ ಹಿಂದೆ ದಂಪತಿ ಕಲಹ ನಂಜನಗೂಡು ಗ್ರಾಮಾಂತರ ಠಾಣೆಯ ಮೆಟ್ಟಿಲೇರಿತ್ತು. ಈ ವೇಳೆ ಪೊಲೀಸರು ಇಬ್ಬರಿಗೂ ಬುದ್ಧಿ ಹೇಳಿ ರಾಜಿ ಸಂಧಾನ ಮಾಡಿ ವಾಪಸ್ ಕಳುಹಿಸಿದ್ದರು. ಆದರೂ ಜಗಳ ಮುಂದುವರೆದಿತ್ತು. ಸೋಮವಾರ ಸಂಜೆ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಓವರ್ ಹೆಡ್ ನೀರಿನ ಟ್ಯಾಂಕ್ ಏರಿ ಕುಳಿತಿದ್ದಾರೆ. ಗ್ರಾಮಸ್ಥರು ಟ್ಯಾಂಕ್‌ನಿಂದ ಇಳಿಯುವಂತೆ ಮನವಿ ಮಾಡಿದ್ದಾರೆ. ನನಗೆ ಜೀವನವೇ ಬೇಡ, ಮಗುವಿನೊಂದಿಗೆ ಇಲ್ಲಿಂದ ಬಿದ್ದು ಸಾಯುತ್ತೇನೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
ಬಳಿಕ ಗ್ರಾಮಸ್ಥರು 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಹಾಯವಾಣಿ ಸಿಬ್ಬಂದಿಗಳಾದ ಗಿರೀಶ್ ಹಾಗೂ ಚೇತನ್ ಅವರು ಕೃಷ್ಣಮೂರ್ತಿಯವರ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಕೃಷ್ಣಮೂರ್ತಿ ಮಗುವಿನೊಂದಿಗೆ ಟ್ಯಾಂಕ್‌ನಿಂದ ಕೆಳಗಿಳಿದರು. ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಇದನ್ನೂ ಓದಿ: ಪುತ್ತೂರು: ಟೈಗರ್ಸ್ ಕಲ್ಲೇಗ ಹುಲಿವೇಷ ತಂಡದ ಅಕ್ಷಯ್ ಕಲ್ಲೇಗ ಬರ್ಬರ ಹತ್ಯೆ; ಮೂವರ ಬಂಧನ