ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹುಣಸೂರು ವಲಯದ ಹತ್ತಿರ ರಿಸರ್ವ್ ಫಾರೆಸ್ಟ್ನಲ್ಲಿ ಜಾನುವಾರು ಮೇಯಿಸಲು ಹೋಗಿದ್ದ ವ್ಯಕ್ತಿ ಹುಲಿ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ನಾಗರಹೊಳೆ ಉದ್ಯಾನವನ ವ್ಯಾಪ್ತಿಯ ಹುಣಸೂರು ವಲಯದ ಹನಗೋಡು ವ್ಯಾಪ್ತಿಯ ಅಯ್ಯನಕೆರೆ ಹಾಡಿಯ ಬಳಿಯ ಉಡುವೆಪುರದ ರೈತ ಗಣೇಶ್ (58) ಎಂದು ಗುರುತಿಸಲಾಗಿದೆ.
ಈತ ಎಂದಿನಂತೆ ಸೋಮವಾರ ಗ್ರಾಮದ ಮುದ್ದನಹಳ್ಳಿ ಅರಣ್ಯ ಪ್ರದೇಶದ ಅಂಚಿನಲ್ಲಿ ಜಾನುವಾರುಗಳನ್ನು ಮೇಯಿಸಲು ಹೋಗಿದ್ದು, ಸಂಜೆ ಜಾನುವಾರುಗಳು ಮನೆಗೆ ಬಂದರೂ ಗಣೇಶ್ ಮನೆಗೆ ಬಂದಿರಲಿಲ್ಲ. ಅನುಮಾನಗೊಂಡು ಕುಟುಂಬಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದಾಗ ಗಣೇಶ್ ಅವರ ಮೃತದೇಹ ಮುದ್ದೇನಹಳ್ಳಿಯ ಬಳಿಯ ಅರಣ್ಯ ಪ್ರದೇಶದ ಬಫರ್ ಏರಿಯಾದ ಪ್ರದೇಶದಲ್ಲಿ ಇರುವ ಕೆರೆ ಬಳಿ ಸಂಜೆ ದೊರಕಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದ್ದು, ಹುಲಿಯನ್ನು ಸೆರೆ ಹಿಡಿಯಬೇಕು ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಘಟನೆ ಬಗ್ಗೆ ಡಿ.ಸಿ.ಎಫ್ ಹರ್ಷಕುಮಾರ್ ಚಿಕ್ಕನರಗುಂದ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದು, ಹುಲಿ ಅರಣ್ಯದೊಳಗೆ ಇರುವುದರಿಂದ ಸೆರೆ ಹಿಡಿಯಲು ಸರ್ಕಾರದಿಂದ ವಿಶೇಷ ಅನುಮತಿ ಬೇಕು. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇವೆ. ಇದರ ಜೊತೆಗೆ ಕಳೆದ 10 ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ರೈತ ರಮೇಶ್ ಎಂಬುವರ ಮೇಲೆಯೂ ಹುಲಿಯೊಂದು ದಾಳಿ ನಡೆಸಿತ್ತು. ಆಗ ಈ ಭಾಗದ ರೈತರಿಗೆ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಬಿಡದಂತೆ ಸೂಚನೆ ನೀಡಲಾಗಿತ್ತು. ಆದರೂ ರೈತರು ಮಾತು ಕೇಳದೆ ಅರಣ್ಯ ಪ್ರವೇಶ ಮಾಡಿದ್ದು ಈ ಸಮಸ್ಯೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆಯೂ ದಾಳಿ: ಸೆಪ್ಟೆಂಬರ್ 21ರಂದು ಇದೇ ಅರಣ್ಯ ವ್ಯಾಪ್ತಿಯ ಮುದ್ದನಹಳ್ಳಿಯ ರಮೇಶ್ ಎಂಬುವರ ಮೇಲೆ ಹುಲಿಯೊಂದು ದಾಳಿ ನಡೆಸಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಆಸ್ಪತ್ರೆಯಿಂದ ಚೇತರಿಸಿಕೊಂಡು ಬರುವ ಮೊದಲೇ ಇದೀಗ ಹುಲಿ ದಾಳಿಗೆ ರೈತ ಮೃತಪಟ್ಟಿರುವುದು ಸುತ್ತಮುತ್ತ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಜೊತೆಗೆ ಅದೇ ಹುಲಿ ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದು, ಸರ್ಕಾರದ ಅನುಮತಿ ಪಡೆದು ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ದನಗಾಹಿ ಮೇಲೆ ಹುಲಿ ದಾಳಿ