ಮೈಸೂರು : ಉಪಚುನಾವಣೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಮಸ್ಟರಿಂಗ್ ಕಾರ್ಯ, ನಿಯೋಜಿಸಿದ ಸ್ಥಳಗಳಿಗೆ ಚುನಾವಣೆ ಸಿಬ್ಬಂದಿ ಹಾಗೂ ಪೊಲೀಸರು ತೆರಳುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಹುಣಸೂರು ಕ್ಷೇತ್ರದಲ್ಲಿ ಒಟ್ಟು 1,14,146 ಪುರುಷರು, 1,12,770 ಮಹಿಳೆಯರು, 4 ಮಂದಿ ಇತರರು ಸೇರಿ ಒಟ್ಟು 2,27,974 ಮತದಾರರಿದ್ದಾರೆ. 50 ಸೂಕ್ಷ್ಮ, 224 ಸಾಮಾನ್ಯ ಸೇರಿ 274 ಮತಗಟ್ಟೆ ಕೇಂದ್ರಗಳಿವೆ. ಕಾಡಂಚಿನ 6 ಹಳ್ಳಿಗಳಲ್ಲಿಯೂ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಪಿಂಕ್ ಮತಗಟ್ಟೆ ಸ್ಥಾಪನೆ ಮಾಡಲಾಗಿಲ್ಲ. ಮತಗಟ್ಟೆ ಕೇಂದ್ರಗಳಿಗೆ ಒಟ್ಟು 1229 ಸಿಬ್ಬಂದಿ ನಿಯೋಜಿಸಲಾಗಿದೆ. ಪೊಲೀಸರು ಹಾಗೂ ಅರೆಸೇನೆ ಪಡೆಯನ್ನು ಭದ್ರತೆಗೆ ಬಳಸಿಕೊಳ್ಳಲಾಗಿದೆ ಎಂದರು.
ಹುಣಸೂರಿನ ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯುತ್ತಿದೆ. ಉಪಚುನಾವಣೆಯಲ್ಲಿ 10 ಮಂದಿ ಕಣದಲ್ಲಿದ್ದು, ಬಿಜೆಪಿಯಿಂದ ಅಡಗೂರು ಹೆಚ್.ವಿಶ್ವನಾಥ್, ಬಿಎಸ್ಪಿಯಿಂದ ಇಮ್ತಿಯಾಜ್ ಅಹ್ಮದ್, ಕಾಂಗ್ರೆಸ್ನಿಂದ ಹೆಚ್ ಪಿ ಮಂಜುನಾಥ್, ಜೆಡಿಎಸ್ನಿಂದ ದೇವರಹಳ್ಳಿ ಸೋಮಶೇಖರ್, ಕರ್ನಾಟಕ ಜನತಾ ಪಕ್ಷದಿಂದ ಎಸ್.ಜಗದೀಶ್, ಕರ್ನಾಟಕ ರಾಷ್ಟ್ರಸಮಿತಿಯಿಂದ ಎಮ್ಮೆಕೊಪ್ಪಲು ತಿಮ್ಮಬೋವಿ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ದಿವಾಕರ್‌ಗೌಡ, ಎಸ್ಡಿಪಿಐನಿಂದ ದೇವನೂರು ಪುಟ್ಟನಂಜಯ್ಯ, ಪಕ್ಷೇತರರಾಗಿ ಉಮೇಶ್, ರೇವಣ್ಣ ಸ್ಪರ್ಧೆಯಲ್ಲಿದ್ದಾರೆ.