ಮೈಸೂರು: ಬೆಳಿಗ್ಗೆ 7:4ರಿಂದ 8:15ರ ಶುಭ ಗಳಿಗೆಯಲ್ಲಿ ಬೆಳ್ಳಿ ರಥದಲ್ಲಿರುವ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಡಾ. ಸಿ.ಎನ್.ಮಂಜುನಾಥ್ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ್ರು.
ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಸಂಪುಟದ ಕೆಲವು ಸಚಿವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ 200 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಚಿಕ್ಕ ವೇದಿಕೆಯಲ್ಲಿ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
![honour to corona warriors](https://etvbharatimages.akamaized.net/etvbharat/prod-images/9205677_myss.jpg)
ಕೊರೊನಾ ವಾರಿಯರ್ಸ್ಗೆ ಸನ್ಮಾನ:
ದಸರಾ ಉದ್ಘಾಟನೆ ಬಳಿಕ ಸಾಂಕ್ರಾಮಿಕ ಕೊರೊನಾ ಸೋಂಕಿನ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ವೈದ್ಯಾಧಿಕಾರಿ ಡಾ. ಟಿ.ಆರ್.ನವೀನ್, ಪೌರ ಕಾರ್ಮಿಕ ಮಹಿಳೆ ಶ್ರೀಮತಿ ಮರಗಮ್ಮ, ಹಿರಿಯ ನರ್ಸ್ ರುಕ್ಮಿಣಿ, ಪೋಲಿಸ್ ಪೇದೆ ಪಿ.ಕುಮಾರ್, ಅನಾಥ ಶವಗಳ ಮುಕ್ತಿದಾತ ಅಯೂಬ್ ಅಹಮದ್ ಮತ್ತು ಆಶಾ ಕಾರ್ಯಕರ್ತೆ ನೂರ್ ಜಾನ್ ಅವರಿಗೆ ಸನ್ಮಾನ ಮಾಡಲಾಯಿತು.
ಮುಂಜಾನೆಯೇ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ:
ನವರಾತ್ರಿಯ ಮೊದಲ ದಿನವಾದ ಇಂದು ಮುಂಜಾನೆ 4:30ರಿಂದಲೇ ಚಾಮುಂಡಿ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಬಳಿಕ ಮೂಲ ಚಾಮುಂಡೇಶ್ವರಿ ದೇವಿಗೆ ಹಂಸವಾಹಿನಿ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಶೃಂಗರಿಸಿ, ಬೆಳ್ಳಿ ರಥದಲ್ಲಿ ಕೂರಿಸಲಾಯಿತು.