ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸರಿಸಮಾನವಾಗಿ ಸರ್.ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಬೇಡವೆಂದು ಅರಸು ಮನೆತನದ ಮುಖಂಡರು ಇಂದು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಬಳಿ ವಿಶ್ವೇಶ್ವರಯ್ಯರ ಪ್ರತಿಮೆ ನಿರ್ಮಾಣಕ್ಕೆ ನಂಜರಾಜ ಅರಸು ಆಕ್ಷೇಪ ಮಂಡ್ಯ ಜಿಲ್ಲೆಯ ಕೆ.ಆರ್. ಎಸ್ ಡ್ಯಾಂ ನ ದಕ್ಷಿಣ ದ್ವಾರದಲ್ಲಿ ನಿರ್ಮಾಣವಾಗುತ್ತಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯ ಪಕ್ಕ ಅವರಿಗೆ ಸರಿಸಮಾನಾಗಿ ಸರ್.ಎಂ. ವಿಶ್ವೇಶ್ವರಯ್ಯನವರ ಪ್ರತಿಮೆ ಸ್ಥಾಪನೆ ಬೇಡ. ಇದು ಮಹರಾಜರಿಗೆ ಮಾಡುವ ಅವಮಾನ. ಆದ್ದರಿಂದ ಅವರ ಪ್ರತಿಮೆಯನ್ನು ಕೆ.ಆರ್.ಎಸ್ ನಲ್ಲಿ ಬೇರೆ ಕಡೆ ನಿರ್ಮಾಣ ಮಾಡಲಿ ಎಂದು ಇತಿಹಾಸ ತಜ್ಞ ಪ್ರೊ. ನಂಜರಾಜ ಅರಸು ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರಿಗೆ ಮನವಿ ಮಾಡಿದ್ದಾರೆ. ಜೊತೆಗೆ ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಅವರ ಹೆಸರಿಡಬೇಕೆಂದು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿದೆ. ಇದನ್ನು ಮರು ಪರಿಶೀಲನೆ ಮಾಡಬೇಕೆಂದು ಇದೇ ಸಂದರ್ಭದಲ್ಲಿ ನಂಜರಾಜು ಒತ್ತಾಯಿಸಿದರು.