ಮೈಸೂರು: ಪೆನ್ಡ್ರೈವ್ ರಹಸ್ಯ ಹೊರಬಂದರೆ ಒಬ್ಬ ಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ. ಪೆನ್ಡ್ರೈವ್ನಲ್ಲಿರುವ ದಾಖಲೆಗಳ ಬಗ್ಗೆ ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೆನ್ಡ್ರೈವ್ನಲ್ಲಿ ಏನಿದೆ ಎಂಬ ಬಗ್ಗೆ ಸರ್ಕಾರ ಹಾಗೂ ಎಲ್ಲರೂ ಮಾತನಾಡುತ್ತಿದ್ದಾರೆ. ಕೆಲವರು ಇದೂ ಸಹ ಹಿಟ್ ಆ್ಯಂಡ್ ರನ್ ಅಂತಿದ್ದಾರೆ. ಈ ಬಗ್ಗೆ ನಾನು ಈಗ ಏನನ್ನೂ ಮಾತನಾಡುವುದಿಲ್ಲ. ಸರಿಯಾದ ಸಮಯ ನೋಡಿ ದಾಖಲೆಗಳನ್ನು ಬಿಡುಗಡೆ ಮಾಡುವೆ ಎಂದರು.
ಮೈಸೂರಿಗೆ ಬೆಳಗ್ಗೆ ಆಗಮಿಸಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಎಸ್ಆರ್ಟಿಸಿ ಚಾಲಕ ಜಗದೀಶ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ಚಾಲಕನ ಆತ್ಮಹತ್ಯೆಗೆ ಕಾರಣ, ನೀಡುತ್ತಿರುವ ಕಿರುಕುಳದ ಬಗ್ಗೆ ಆತ ಡೆತ್ನೋಟ್ ಬರೆದಿಟ್ಟಿದ್ದಾನೆ. ಸದ್ಯ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವೈದ್ಯರಲ್ಲಿ ಮಾಹಿತಿ ಪಡೆದಿದ್ದೇನೆ. ಇವರ ವರ್ಗಾವಣೆಯ ಹಿಂದೆ ಸಚಿವರ ಆದೇಶ ಮತ್ತು ಒತ್ತಡವಿದೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಚಾಲಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ಪೊಲೀಸರನ್ನು ಕೇಳಿದರೆ ವ್ಯಕ್ತಿ ಇನ್ನೂ ಸತ್ತಿಲ್ಲ, ಅದಕ್ಕೆ ಎಫ್ಐಆರ್ ಹಾಕಿಲ್ಲ ಎಂದು ಹೇಳಿದ್ದಾರೆ. ಆತ್ಮಹತ್ಯೆಗೂ ಮುನ್ನ ಜಗದೀಶ್ ಡೆತ್ನೋಟ್ನಲ್ಲಿ ಎಲ್ಲವನ್ನೂ ಬರೆದಿದ್ದಾನೆ. ಆದ್ದರಿಂದ ಈ ಬಗ್ಗೆ ತನಿಖೆ ಆಗಬೇಕು. ಮುಖ್ಯಮಂತ್ರಿಗಳು ತಕ್ಷಣ ಈ ಮಂತ್ರಿಯನ್ನು ವಜಾ ಮಾಡಿ, ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು. ಇಂದು ಈ ವಿಚಾರವನ್ನು ವಿಧಾನ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಅಧಿಕಾರಿಗಳು ರಾಜಕಾರಣಿಗಳ ಮಾತು ಕೇಳಿ ಕಳ್ಳಾಟ ಆಡುತ್ತಿದ್ದಾರೆ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದರು.
ಸಿಎಂ ನೇತೃತ್ವದಲ್ಲಿ ವರ್ಗಾವಣೆ ದಂಧೆ: ರಾಜ್ಯದಲ್ಲಿ ಹೊಸ ಸರ್ಕಾರ ಬಂದು 50 ದಿನ ಆಗಿಲ್ಲ. ವರ್ಗಾವಣೆ ದಂಧೆ ನಡೆಯುತ್ತಿದೆ. ಯಾವುದೇ ಹುದ್ದೆಯ ವರ್ಗಾವಣೆಗೆ ಇಂತಿಷ್ಟು ಹಣ ಫಿಕ್ಸ್ ಆಗಿದೆ. ಹಣವಿಲ್ಲದೇ ಯಾವುದೇ ವರ್ಗಾವಣೆ ನಡೆಯದು. ಇದು ಸಿಎಂ ನೇತೃತ್ವದಲ್ಲೇ ನಡೆಯುತ್ತಿದೆ. ಪ್ರಮುಖ ಹುದ್ದೆಗಳೆಲ್ಲ ದುಡ್ಡಿನಿಂದಲೇ ನಡೆಯುತ್ತಿದ್ದು, ಇದಕ್ಕೆ ಸಿಎಂ ನೇತೃತ್ವವಿದೆ ಎಂದರು.
ತಾವು ವಿರೋಧ ಪಕ್ಷದ ನಾಯಕರಾಗುತ್ತೀರಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿಯಲ್ಲಿಯೇ ಹಲವರು ನಾಯಕರು ವಿರೋಧ ಪಕ್ಷದ ನಾಯಕರಾಗಲು ಸಮರ್ಥರಿದ್ದಾರೆ. ನಾವೂ ಕೂಡ ವಿರೋಧ ಪಕ್ಷದ ಸ್ಥಾನದಲ್ಲಿ ಇರುತ್ತೇವೆ ಎಂದು ಹೇಳಿದ ಅವರು, ನನ್ನ ಆಸ್ತಿಯನ್ನು ತನಿಖೆ ಮಾಡುವುದಾಗಿ ಹೇಳುತ್ತಿದ್ದಾರೆ. ಯಾವಾಗ ಬೇಕಾದರೂ, ಯಾವುದೇ ಇಂಟರ್ನ್ಯಾಷನಲ್ ತನಿಖಾ ಸಂಸ್ಥೆಯಿಂದ ಬೇಕಾದರೂ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.
ವಿಧಾನಸೌಧದಲ್ಲೂ ಪೆನ್ಡ್ರೈವ್ ಪ್ರಸ್ತಾವನೆ ಮಾತನಾಡಿದ ಕುಮಾರಸ್ವಾಮಿ, ನನ್ನ ಪೆನ್ಡ್ರೈವ್ ಎಂಟಿ (ಖಾಲಿ) ಅಲ್ಲ ಎಂದು ಹೇಳಿದರು.
ಬಳಿಕ ಕುಮಾರಸ್ವಾಮಿ ದಾಖಲೆ ಇಲ್ಲದೆ ಆರೋಪ ಮಾಡ್ತಾರೆ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾಗಿ ಹಲವು ವರ್ಷ ಕೆಲಸ ಮಾಡಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದಾಗ ಸಿದ್ದರಾಮಯ್ಯ ಯಾವುದೇ ದಾಖಲೆ ಬಿಡುಗಡೆ ಮಾಡಿಲ್ಲ. ಅವರು ಇದುವರೆಗೆ ದಾಖಲೆ ಕೊಟ್ಟು ಯಾವುದೇ ಆರೋಪಗಳಿಗೆ ತಾರ್ಕಿಕ ಅಂತ್ಯ ಕೊಟ್ಟಿಲ್ಲ. ನಾನು ವಿಪಕ್ಷದಲ್ಲಿದ್ದಾಗ ದಾಖಲೆ ಸಮೇತ ಆರೋಪ ಮಾಡುತ್ತಿದ್ದೆ ಎಂದು ಟೀಕಿಸಿದರು.
ರಾಜಕೀಯ ನಿವೃತ್ತಿ ಪಡೆಯತ್ತೇನೆ: ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರ ಮಗ ವರ್ಗಾವಣೆ ದಂಧೆ ಮಾಡಿದ್ರಾ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನನ್ನ ಮಗ ಯಾವತ್ತಾದ್ರೂ ವರ್ಗಾವಣೆ ದಂಧೆ ಮಾಡಿದ್ರೆ ದಾಖಲೆ ಇದ್ರೆ ಹೊರಗಡೆ ಇಡುವುದಕ್ಕೆ ಹೇಳಿ. ನಾನು ಸಿಎಂ ಆಗಿದ್ದಾಗ ನನ್ನ ಮಗ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಒಂದು ವೇಳೆ ನಾನು ಸಿಎಂ ಆಗಿದ್ದಾಗ ನನ್ನ ಮಗ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿದ್ರೆ, ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಅಧಿಕಾರಿಗಳ ವರ್ಗಾವಣೆ ದಂಧೆಗಿಳಿದ ರಾಜ್ಯ ಸರ್ಕಾರ: ಹೆಚ್.ಡಿ.ಕುಮಾರಸ್ವಾಮಿ