ಮೈಸೂರು: ಕೆಲವು ದಿನಗಳ ಹಿಂದೆ ನಾನು ಊಟದ ವಿಚಾರದಲ್ಲಿ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದಕ್ಕೆ ಕೆಲವರು ವಿರೋಧಿಸಿದ್ದರು. ಆ ಸಂದರ್ಭ ಕುರಿತು ನನ್ನನ್ನು ಸಮರ್ಥಿಸಿಕೊಂಡಿದ್ದು, ನನ್ನ ಸಹೋದ್ಯೋಗಿಗಳಲ್ಲ, ಸಂವಿಧಾನ ಎಂದು ಸಚಿವರು ಪುಸ್ತಕದಲ್ಲಿ ಬರೆದಿದ್ದಾರೆ. ಆದರೆ, ನಿಜವಾಗಿ ನನ್ನ ಬೆನ್ನಿಗೆ ನಿಂತು ಮಹಾದೇಶ್ವರ ಬೆಟ್ಟದಿಂದ ಬೀದರ್ವರೆಗೂ ಒಂದು ಅಲೆ ಎಬ್ಬಿಸಿದ್ದು ಭೀಮ ಪರಿವಾರದವರು. ಸಂವಿಧಾನದ ನೆರಳು ಹಾಗೂ ಭೀಮ ಪರಿವಾರ ಎರಡೂ ನನ್ನನ್ನು ಕಾಪಾಡಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಸ್ಮರಿಸಿದರು.
ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಅವರು ರಚಿಸಿರುವ ಸಾಮಾಜಿಕ ಮತ್ತು ರಾಜಕೀಯ ಕುರಿತ ಬರಹಗಳನ್ನು ಒಳಗೊಂಡ 'ಸಂವಿಧಾನದ ನೆರಳಲ್ಲಿ' ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಪ್ರಗತಿಪರ ಚಿಂತಕರು ಸಂವಿಧಾನದ ಪರ ಇದ್ದಾರೆ. ಅವರ ಅನುಭವ ಅತ್ಯಂತ ಮೌಲ್ಯವಾದದ್ದು. ಅವುಗಳು ಬರಹ ರೂಪದಲ್ಲಿ ಬರಬೇಕು. ಆ ಸಂಪತ್ತನ್ನು ಯುವ ಪೀಳಿಗೆಗೆ ತಲುಪಿಸುವುದು ಎಲ್ಲ ಲೇಖಕರ ಕರ್ತವ್ಯ. ನಾವು ಇನ್ನು ಮುಂದೆ ಪ್ರಗತಿಪರರನ್ನು ದೂರವಿಡುವುದು, ಅನುಮಾನಿಸುವುದು ಬೇಡ. ಗಣತಾದಿ ಪರಿವಾರ, ಭೀಮಾಧಿಪರಿವಾರ, ಕಾನೋನಾದಿಪರಿವಾರ ಒಂದಕ್ಕೊಂದು ಸಾಂಸ್ಕೃತಿಕವಾಗಿ ಹೆಣಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ನಾವು ಸಂವಿಧಾನದ ನೆರಳಲ್ಲಿದ್ದೀವಾ ಅಥವಾ ಸಂವಿಧಾನದ ಬಲದಲ್ಲಿದ್ದೀವಾ ಎಂಬುದನ್ನು ಅರಿಯಬೇಕು. ಸಂವಿಧಾನ ಎಂಬುದು ದೊಡ್ಡ ವೃಕ್ಷ. ಅದರಡಿ ಮಲಗಿ ನಿದ್ದೆ ಮಾಡಬಾರದು. ಆ ನೆರಳಿಲ್ಲಿ ಮಲಗಿ ಕಣ್ಣುಬಿಟ್ಟು ಕನಸು ಕಾಣಬೇಕು. ಬಿಟ್ಟ ಕಣ್ಣಿನ ಕನಸನ್ನು ಸಾಕಾರಗೊಳಿಸಬೇಕು. ಹೆಚ್ಚಿನ ಶ್ರಮವಹಿಸಿ ಜಗತ್ತಿನೊಂದಿಗೆ ಜೀವಂತವಾಗಿ ವ್ಯವಹರಿಸಬೇಕು ಎಂದು ಹೇಳಿದರು.
ಒಬ್ಬ ರಾಜಕಾರಣಿ ಅಧಿಕಾರದಲ್ಲಿದ್ದಾಗ, ಕೆಳಗಿಳಿದಾಗ ಹಾಗೂ ಮತ್ತೇ ಅಧಿಕಾರಕ್ಕೇರಿದಾಗ ತಮಗಾದ ಅನುಭವಗಳನ್ನು ಬರೆದಿಡುವುದು ಬಹುಮುಖ್ಯವಾದ ವಿಚಾರ. ಈ ರೀತಿಯಲ್ಲಿ ಕೆಂಗಲ್ ಹನುಮಂತಯ್ಯ ಮತ್ತು ಡಿ.ದೇವರಾಜ ಅರಸು ಅವರು ತಮ್ಮ ಜೀವಿತ ಕಾಲದ ಅನುಭವಗಳನ್ನು ಹಾಗೂ ಮೌಲ್ಯಗಳನ್ನು ಬರೆಯದೇ ನಾವು ಏನನ್ನೋ ಕಳೆದುಕೊಂಡಿದ್ದೇವೆ. ಡಾ. ಹೆಚ್ ಸಿ ಮಹದೇವಪ್ಪ ಅವರು ತಾವು ಕಂಡದ್ದನ್ನು ಬರೆದಿರುವುದು ಸಂತೋಷದ ವಿಚಾರ ಎಂದರು.
ಈ ಪುಸ್ತಕದ ಇಡೀ ಓದು ಹಾಡು ಮಾತಿನ ಅಡಿಗೆ ಹಾಗೂ ನೇರ ಮಾತಿನ ಬಡಿಗೆಯೇ ಹೌದು. ಇದರಲ್ಲಿ ಎಲ್ಲೂ ತೊಡಕುಗಳಿಲ್ಲ, ಉಪಮೇಯ, ಉಪಮಾನಗಳಿಲ್ಲ. ಅವರು ಕಂಡದ್ದು, ಅನುಭವಿಸಿದ್ದನ್ನು ದಾಖಲಿಸಿದ್ದಾರೆ. ಒಬ್ಬ ರಾಜಕಾರಣಿ ನೇರಮಾತಿನ ಬಡಿಗೆ ಕೈಗೆತ್ತಿಗೊಂಡು ಸಮಾಜಕ್ಕೆ ಹೇಳುವುದು ಬಹಳ ಪ್ರಮುಖವಾಗಿದೆ. ಅವರ ಬಡಿಗೆಯಂಥ ಮಾತುಗಳ ಮೂಲಕ ಈ ದೇಶದಲ್ಲಿ ಚರ್ಚೆಯಾಗುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಬಳಿಕ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ಮಾತನಾಡಿ, ನನ್ನ ಭಾವನೆ, ನಿಲುವು ಮತ್ತು ಅಭಿಪ್ರಾಯಗಳನ್ನು ಅಕ್ಷರ ರೂಪಕ್ಕಿಳಿಸಿದ ಪುಸ್ತಕ ಇದಾಗಿದೆ. ಸಾಹಿತಿಗಳು, ಪ್ರಗತಿಪರ ಚಿಂತಕರು, ರಾಜಕೀಯ ಮುಖಂಡರು, ಯುವ ಸಮುದಾಯ ಹಾಗೂ ಮಹಿಳೆಯರು, ಸಾರ್ವಜನಿಕರು ಈ ಸಮಾರಂಭಕ್ಕೆ ಆಗಮಿಸಿ ಯಶಸ್ವಿಗೊಳಿಸಿದ್ದಾರೆ. ನನಗೆ ವೈಯಕ್ತಿಕವಾಗಿ ಸಂತೋಷವಾಗಿದೆ. ಅದರಂತೆ ಈ ಪುಸ್ತಕವನ್ನು ಎಲ್ಲರೂ ಓದಿ ವಿಮರ್ಶೆ ಮಾಡಬೇಕು ಎಂದು ತಿಳಿಸಿದರು.
ಪುಸ್ತಕ ಕುರಿತು ಮಾತನಾಡಿದ ವಿಮರ್ಶಕರಾದ ಡಾ.ಕೆ ವೈ ನಾರಾಯಣಸ್ವಾಮಿ, ಸಚಿವರು ತಾವು ಕಂಡಂತ ರಾಜಕೀಯ ಹಾಗೂ ಸಾಮಾಜಿಕ ಸಂಗತಿಗಳನ್ನು ತುಂಬಾ ಪರಿಣಾಮಕಾರಿಯಾಗಿ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅನೇಕ ರಾಜಕಾರಣಿಗಳು ತಮ್ಮ ನಡೆನುಡಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಆದರೆ ಸಚಿವರು ಪುಸ್ತಕದಲ್ಲಿ ದಾಖಲಿಸಿರುವ ಅನೇಕ ಕಾರ್ಯಸೂಚಿಗಳನ್ನು ಹೇಳುವ ಹಾಗೂ ಮಾತಾನಾಡುವ ಪ್ರಾಮಾಣಿಕತೆ ಮತ್ತು ನಿಷ್ಠೂರತೆಯು ಡಾ. ಬಿ ಆರ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ತಕ್ಕಂತೆ ತಮ್ಮ ರಾಜಕಾರಣದ ಬದುಕಿನೊಳಗೆ ಹೋರಾಟ ನಡೆಸಬೇಕು ಎಂಬ ಸಿದ್ಧಾಂತದಿಂದ ದಕ್ಕಿದೆ ಎಂದು ಹೇಳಿದರು.
ಇದನ್ನೂ ಓದಿ: Watch...ಬೇಸ್ ಲೆಸ್ ಆರೋಪದ ಪ್ರಶ್ನೆಗಳನ್ನು ಕೇಳಬೇಡಿ: ಸಚಿವ ಎಚ್ ಸಿ ಮಹಾದೇವಪ್ಪ ಅಸಮಾಧಾನ