ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಾದಬ್ರಹ್ಮ ಹಂಸಲೇಖ ದೇಸಿ ಕಲಾ ತಂಡ ನಡೆಸಿಕೊಟ್ಟ ಸಂಗಿತ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಮನಸೂರೆಗೊಂಡಿತು.
ಅರಮನೆ ಮುಂಭಾಗದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಧನೆಯನ್ನು ಹಂಸಲೇಖ ಗುಣಗಾನ ಮಾಡಿದರು. ಭಕ್ತಿಗೀತೆ, ದೇಶಪ್ರೇಮ, ಹಂಸಲೇಖ ರಚಿಸಿದ ಸಿನಿಮಾ ಗೀತೆಗಳನ್ನು ಗಾಯಕರು ಪ್ರಸ್ತುತ ಪಡಿಸಿ ವೀಕ್ಷಕರನ್ನು ಮನರಂಜಿಸಿದರು.
ರಾಷ್ಟ್ರಕವಿ ಕುವೆಂಪು ವಿರಚಿತ, ಓ ನನ್ನ ಚೇತನ ಆಗು ನೀ ಅನಿಕೇತನ... ಹಾಡಿನ ಮೂಲಕ ಗಾಯಕಿ ಪೃಥ್ವಿ ದೇಸಿ ಸಂಗೀತಕ್ಕೆ ಚಾಲನೆ ನೀಡಿದರು. ಬಳಿಕ ದೇವಿ ಚಾಮುಂಡಿಯನ್ನು ಸ್ಮರಿಸುವ ಗೀತೆಯನ್ನು ಗಾಯಕರು ಹಾಡಿದರು. ದೇವಿ ಸ್ತುತಿಸಿದ ಬಳಿಕ ಮೈಸೂರಿನ ಗಾಯಕ ನಿತಿನ್ ರಾಜಾರಾಮ್ ಶಾಸ್ತ್ರಿ ಈಶ್ವರನ ಸ್ತುತಿಸುವ ಓಂ ಮಹಾಪ್ರಾಣಂ ದೀಪಂ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಹಂಸಲೇಖರಿಂದ ಮೆಚ್ಚುಗೆ ಪಡೆದರು.
ರವಿಚಂದ್ರನ್ ಹಾಡಿ ಹೊಗಳಿದ ಹಂಸಲೇಖ:
ರವಿ ಚಂದ್ರನ್ ಕನ್ನಡ ಚಿತ್ರರಂಗಕ್ಕೆ ಬರದೆ ಇದ್ದಿದ್ದರೆ ದೊಡ್ಡ ಶೂನ್ಯ ಉಂಟಾಗುತ್ತಿತ್ತು. ನಾನು ನಾಟಕ ರಂಗದಲ್ಲಿ ಮುಳುಗಿ ಹೋಗಿದ್ದೆ. ನನನ್ನು ಗುರುತಿಸಿ ನಮ್ಮ ಯಜಮಾನ್ರು ನನ್ನ ನೇರನುಡಿಯನ್ನು ಇಷ್ಟಪಟ್ಟು ನನಗೆ ಅವಕಾಶ ಮಾಡಿಕೊಟ್ಟರು. ಸುಮಾರು 25 ಕ್ಕೂ ಅಧಿಕ ಸಿನಿಮಾಗಳಲ್ಲಿ ಯಜಮಾನರ ಒಟ್ಟಿಗೆ ಕೆಲಸ ಮಾಡಲು ನೆರವಾಯಿತು ಎಂದು ರವಿಚಂದ್ರನ್ ಅವರನ್ನು ಹಾಡಿ ಹೊಗಳಿದರು.
ದೇಶಭಕ್ತ ಗೀತೆ ಹಾಡಿದ ಯುವಕವಿ
ಬಳಿಕ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಯುವಕವಿ ರಮೇಶ್ ವಿರಚಿತ ದೇಶಭಕ್ತಿ ಗೀತೆಯನ್ನು ಹಾಡಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನ ಸಲ್ಲಿಸಿದರು. ಬಳಿಕ 5 ವರ್ಷದ ಬಾಲ ಗಾಯಕಿ ಜ್ಞಾನ ಕರ್ನಾಟಕದ ವೈಭವ ಅನಾವರಣ ಮಾಡಿದಳು. ಗಾಯಕ ಚಿನ್ಮಯ್ ’’ಈ ಭೂಮಿ ಬಣ್ಣದ ಬುಗುರಿ’’ ಹಾಡಿದರು.
ಬಾಲಕಿ ಜ್ಞಾನ ಗಾಯನಕ್ಕೆ ಮನಸೋತ ಶಾಸಕ ಜಿ.ಟಿ.ದೇವೇಗೌಡ 2500 ರೂ., ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ಧಲಿಂಗಸ್ವಾಮಿ 3 ಸಾವಿರ ರೂ. ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸಾರ್ವಜನಿಕರ ಮನವಿ ಮೇರೆಗೆ ದಸರಾ ದೀಪಾಲಂಕಾರ ವೀಕ್ಷಣೆಯ ಅವಧಿ ವಿಸ್ತರಣೆ