ಮೈಸೂರು: ಆಯ್ದ ಪತ್ರಕರ್ತರಿಗೆ ಸಿಎಂ ಕಚೇರಿ ಹಾಗೂ ಸಚಿವರಿಂದ ಗಿಫ್ಟ್ ಸಲ್ಲಿಕೆ ಇದೊಂದು ಇಂಟೆನ್ಷನಲ್ ಬ್ರೈಬ್ (ಉದ್ದೇಶಪೂರ್ವಕ ಲಂಚ) ಎಂದು ವಿಧಾನ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಇಂದು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಿಎಂ ಕಚೇರಿಯಿಂದ ಹಾಗೂ ಮಂತ್ರಿ ಕಚೇರಿಯಿಂದ ಆಯ್ದ ಮಾಧ್ಯಮದವರಿಗೆ ದೀಪಾವಳಿ ಉಡುಗೊರೆ ಹಾಗೂ ಇತರ ಆಮಿಷ ತೋರಿರುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳಿಗೆ ಚುನಾವಣೆ ಹತ್ತಿರವಿರುವಾಗ ಈ ರೀತಿ ಗಿಫ್ಟ್ ಕೊಡುವುದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಬೇಕು ಎಂದು ಒತ್ತಾಯಿಸಿದರು.
ಇನ್ನು, ಯಾವ ಮಂತ್ರಿ ಗಿಫ್ಟ್ ನೀಡಿದ್ದಾರೋ ಅವರನ್ನು ಸಂಪುಟದಿಂದ ಕಿತ್ತು ಬಿಸಾಕಬೇಕು. ಇದು ಮಾಧ್ಯಮದವರ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುವಂತೆ ಮಾಡುತ್ತದೆ. ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮದ ಕತ್ತು ಹಿಸುಕುವ ಕೆಲಸವನ್ನು ಈ ರೀತಿಯ ಬೆಳವಣಿಗೆಗಳು ಮಾಡುತ್ತವೆ. ಇನ್ನು, ಮುಖ್ಯಮಂತ್ರಿಗಳ ಕಚೇರಿಯಿಂದ ಈ ರೀತಿಯ ಕೆಲಸವಾಗಿದ್ದರೆ, ಅದಕ್ಕೆ ಕಾರಣವಾದ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳಬೇಕು. ಈ ದುಡ್ಡು ಎಲ್ಲಿಂದ ಬಂತು ಎಂಬುದರ ಬಗ್ಗೆ ತನಿಖೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಒತ್ತಾಯಿಸಿದರು.
ವ್ಯವಸ್ಥೆಯಲ್ಲೇ ಭ್ರಷ್ಟಾಚಾರ ಹೆಚ್ಚಾಗಿದೆ: ಜೊತೆಗೆ ಸಚಿವರು ದೀಪಾವಳಿ ಗಿಫ್ಟ್ ಗಳನ್ನು ನೀಡಿದ್ದಾರೆ. ಇದರ ಬಗ್ಗೆ ತನಿಖೆ ಮಾಡಬೇಕು. ಇಂತಹ ಸಚಿವರನ್ನು ಸಂಪುಟದಿಂದ ಕಿತ್ತು ಬಿಸಾಕಿ. ಇಂದು ಸರ್ಕಾರದಲ್ಲಿ ಮಾತ್ರ ಭ್ರಷ್ಟಾಚಾರ ಹೆಚ್ಚಾಗಿಲ್ಲ. ವ್ಯವಸ್ಥೆಯಲ್ಲೇ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಪತ್ರಕರ್ತರಿಗೆ ಉಡುಗೊರೆ ಪ್ರಕರಣ ಕಾಂಗ್ರೆಸ್ ಟೂಲ್ ಕಿಟ್ ಭಾಗ: ಸಿಎಂ ಬೊಮ್ಮಾಯಿ