ಮೈಸೂರು: ಆಪರೇಷನ್ ಕಮಲ ಹೇಗೆಲ್ಲಾ ನಡೆಯಿತು ಎಂಬ ರಹಸ್ಯವನ್ನು ಹೆಚ್.ವಿಶ್ವನಾಥ್ ಮೊದಲ ಬಾರಿಗೆ ಬಾಯ್ಬಿಟ್ಟಿದ್ದಾರೆ.
ಬಿಜೆಪಿ ಸೇರ್ಪಡೆಯಾದ ನಂತರ ಮೈಸೂರಿಗೆ ಆಗಮಿಸಿದ ಹೆಚ್. ವಿಶ್ವನಾಥ್, ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಹೋಗಿ ತದನಂತರ ನಗರ ಬಿಜೆಪಿ ಕಚೇರಿಯಲ್ಲಿ ನಡೆದ ಕನಕ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ್ರು.
ಸಂಸದ ಶ್ರೀನಿವಾಸ್ ಪ್ರಸಾದ್ ಅವರು ತಮ್ಮ ಮನೆಗೆ ಕರೆದು, ನೀವು ಜೆಡಿಎಸ್ ಬಿಟ್ಟು ಬರಬೇಕು. ಬಿಜೆಪಿ ಅಧಿಕಾರಕ್ಕೆ ಬರಲು ನೀವೇ ಮುಂದೆ ನಿಲ್ಲಬೇಕು ಎಂದು ಹೇಳಿದರು. ಅದಕ್ಕೆ ನಾನು ಯಸ್ ಎಂದೆ. ಅ ನಂತರದ ಹತ್ತು ಹದಿನೈದು ದಿನಗಳಲ್ಲಿ ಎಲ್ಲವೂ ನಡೆಯಿತು ಎಂದು ವೇದಿಕೆಯ ಭಾಷಣದಲ್ಲೇ ಆಪರೇಷನ್ ಕಮಲದ ಬಗ್ಗೆ ಹೇಳಿದ್ದಾರೆ.
ವಿಶ್ವನಾಥ್ ಬಿಜೆಪಿಗೆ ಬರಲು ನಾನು ಹೇಳಿದರೆ ಸರಿ ಆಗುವುದಿಲ್ಲ, ನೀವು ಹೇಳಬಹುದೇ ಎಂದು ಯಡಿಯೂರಪ್ಪ ಅವರು ಶ್ರೀನಿವಾಸ್ ಪ್ರಸಾದ್ರನ್ನು ಕೇಳಿದ್ದರಂತೆ. ಆಗ ಪ್ರಸಾದ್ ಅವರು ನನ್ನನ್ನು ತಮ್ಮ ಮನೆಗೆ ಕರೆಸಿಕೊಂಡು, ನಿಮ್ಮತ್ರ ಒಂದು ವಿಚಾರ ಕೇಳಬೇಕು, ಅದನ್ನು ಹೇಳಬೇಕೋ ಬೇಡವೋ ಎಂದು ಕೇಳಿದರು. ನಾನು ಹೇಳಿ ಸರ್ ಎಂದೆ. ನೀವು ಜೆಡಿಎಸ್ನ ಶಾಸಕ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮುಂದೆ ನಿಲ್ಲಬೇಕು ಇದು ಸಾಧ್ಯನಾ? ಎಂದು ಶ್ರೀನಿವಾಸ್ ಪ್ರಸಾದ್ ಕೇಳಿದರು. ಅದಕ್ಕೆ ನಾನು ಯೆಸ್ ನೀವು ಹೇಳಿದ ಮೇಲೆ ನಾನು ಇಲ್ಲ ಎನ್ನಲು ಆಗುವುದಿಲ್ಲ ಎಂದು ಅವರ ಮಾತಿಗೆ ಒಪ್ಪಿದೆ ಎಂದು ಹೇಳಿದ್ದಾರೆ.
ನಿಜವಾಗಿಯೂ ಆಪರೇಷನ್ ಕಮಲಕ್ಕೆ ಶ್ರೀನಿವಾಸ್ ಪ್ರಸಾದ್ ಕಾರಣ. ಅವರ ಮತ್ತು ನನ್ನ ನಡುವಿನ ಅವಿನಾಭಾವ ಸಂಬಂಧ ಯಡಿಯೂರಪ್ಪ ಸಿಎಂ ಆಗಲು ಸಾಧ್ಯವಾಯಿತು ಹೇಳಿದ್ದಾರೆ.