ಮೈಸೂರು: ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡಿರುವ ಕ್ರಮ ಸರಿಯಿಲ್ಲ. ಇದರ ಹಿಂದೆ ವ್ಯವಹಾರ ನಡೆದಿದೆ. ಈ ಬಗ್ಗೆ ಪ್ರಧಾನಮಂತ್ರಿಯವರಿಗೆ ಪತ್ರ ಬರೆಯುತ್ತೇನೆ. ರಾಜ್ಯದಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಇಂದು ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಳ್ಳಾರಿಯ ಜಿಂದಾಲ್ ಕಂಪನಿಗೆ 3,500ಕ್ಕೂ ಹೆಚ್ಚು ಎಕರೆ ಭೂಮಿಯನ್ನು ನೀಡಿರುವುದು ಸರಿಯಲ್ಲ ಎಂದರು.
ಇದೇ ವಿಚಾರಕ್ಕೆ ಹಿಂದೆ ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿತ್ತು. ಆದ್ರೀಗ ಇಡೀ ರಾಜ್ಯವೇ ಕೋವಿಡ್ನಿಂದ ಬಳಲುತ್ತಿದೆ. ಬೆಡ್ ಇಲ್ಲ, ಆಕ್ಸಿಜನ್ ಇಲ್ಲ, ಆಸ್ಪತ್ರೆಗಳು ಇಲ್ಲ. ಇಂತಹ ಸಮಯದಲ್ಲಿ ಜಿಂದಾಲ್ ಖಾಸಗಿ ಕಂಪನಿಗೆ ಭೂಮಿಯನ್ನು ಪರಭಾರೆ ಮಾಡುವ ಅಗತ್ಯ ಏನಿತ್ತು ಎಂದು ಪ್ರಶ್ನೆ ಮಾಡಿದರು.
ಈ ಕಂಪನಿಯ ವಿರುದ್ಧ ಹಲವಾರು ದೂರುಗಳು ಇದ್ದು, ಸರ್ಕಾರಕ್ಕೆ 2 ಸಾವಿರ ಕೋಟಿ ಹಣ ಕಟ್ಟಬೇಕಿದೆ. ಜತೆಗೆ ಲೋಕಾಯುಕ್ತದಲ್ಲಿ ಪ್ರಕರಣವಿದೆ. ಹೀಗಿರುವಾಗ ಏಕೆ ಇವರಿಗೆ ಭೂಮಿಯನ್ನು ನೀಡಿದ್ದಾರೆ. ಇದರ ಹಿಂದೆ ಭ್ರಷ್ಟಾಚಾರ ನಡೆದಿದೆ ಎಂಬ ಅಸಮಾಧಾನ ಹೊರಹಾಕಿದರು.
ಕೋವಿಡ್ ನಿರ್ವಹಣೆಗೆ ಹಣ ಇಲ್ಲ ಎಂದು ಹೇಳುತ್ತಾರೆ. ಆದರೆ ಪರ್ಸೆಂಟೇಜ್ ಕೊಟ್ಟರೆ ಕಂಟ್ರಾಕ್ಟರ್ ಬಿಲ್ ಇವತ್ತು ಸಹ ಆಗುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯನ್ನು ಇಟ್ಟುಕೊಂಡು ಯಾವ ಮಂತ್ರಿಗಳಿಗೂ ಸ್ವತಂತ್ರ ಇಲ್ಲದ ರೀತಿಯಲ್ಲಿ ಆಗಿದೆ.
ಇದನ್ನೂ ಓದಿ: ನಡು ಬೀದಿಯಲ್ಲೇ ಗುಟ್ಕಾಕ್ಕಾಗಿ ಹೊಡೆದಾಡಿಕೊಂಡ ಯುವಕರು: ವಿಡಿಯೋ
ಕೋವಿಡ್ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಲೂಟಿ ಮಾಡುತ್ತಿದ್ದರೂ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದವರು ಯಾರೂ ಕೂಡ ಮಾತನಾಡುತ್ತಿಲ್ಲ. ಕಾರಣ ಎಲ್ಲಾ ರಾಜಕಾರಣಿಗಳು ಖಾಸಗಿ ಆಸ್ಪತ್ರೆಗಳ ಪಾಲುದಾರರಾಗಿದ್ದಾರೆ. ಸಿದ್ದರಾಮಯ್ಯರ ಮಗ ಯತೀಂದ್ರ 5 ಆಸ್ಪತ್ರೆಗಳ ಪಾಲುದಾರರಲ್ಲವೇ ಎಂದು ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.