ಮೈಸೂರು : ಚುನಾವಣಾ ಸಮಯದಲ್ಲಿ ವ್ಯಕ್ತಿಗತ ಆಪಾದನೆ ಹಾಗೂ ಅಭ್ಯರ್ಥಿಗಳನ್ನು ಅಧೀರರನ್ನಾಗಿ ಮಾಡುವುದು ಸಮಂಜಸವಲ್ಲ. ಆದ್ದರಿಂದ, ಸಚಿವ ಎಸ್.ಟಿ ಸೋಮಶೇಖರ್ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಒತ್ತಾಯಿಸಿದರು.
ಇಂದು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಎಸ್. ಟಿ ಸೋಮಶೇಖರ್ ಅವರು ಜೆಡಿಎಸ್ ಅಭ್ಯರ್ಥಿ ಬಗ್ಗೆ ಕಿಡ್ನಿ ಮಾರಾಟ ಮಾಡಿದವರು ಎಂದು ಮಾತನಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ನಿಮ್ಮ ಮೇಲೆ ಅತ್ಯಾಚಾರದ ಕೇಸ್ಗಳಿವೆ ಎಂದು ಮಾತನಾಡಿದ್ದಾರೆ. ಇದು ಸಮಂಜಸ ಅಲ್ಲ ಎಂದರು.
ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ವ್ಯಕ್ತಿಗತವಾಗಿ ಆಪಾದನೆ ಮಾಡುವುದು, ಅಭ್ಯರ್ಥಿಗಳನ್ನು ಅಧೀರರನ್ನಾಗಿ ಮಾಡುವುದಾಗಲಿ, ಯಾವುದೇ ಸಂಪುಟ ದರ್ಜೆ ಸಚಿವರಿಗೆ ಶೋಭೆ ತರುವಂತದ್ದಲ್ಲ. ಆಧಾರ ಇಲ್ಲದೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಮಂಜೇಗೌಡ, ಕೆಜಿಎಫ್ ಬಾಬು ಮನೆಯವರು ಮಾನಸಿಕವಾಗಿ ಕುಂದಿದ್ದಾರೆ ಎಂದು ಹೇಳಿದರು.
ಚುನಾವಣೆಯನ್ನು ವೋಟ್ ಬಜಾರ್ ಆಗಿ ಮಾಡುತ್ತಿದ್ದಾರೆ : ಚುನಾವಣೆಯನ್ನು ನಾಯಕರು ವೋಟ್ ಬಜಾರ್ ಆಗಿ ಮಾಡುತ್ತಿದ್ದಾರೆ. ಮೇಲ್ಮನೆ ಸದಸ್ಯತ್ವಕ್ಕೆ ನಡೆಯುತ್ತಿರುವ ಚುನಾವಣೆಯನ್ನು ಎಲ್ಲಾ ಪಕ್ಷದ ನಾಯಕರು ಮತಸಂತೆಯನ್ನಾಗಿ ಮಾಡಿಕೊಳ್ಳುತ್ತಿದ್ದು, ಇದು ಉತ್ತಮ ಬೆಳವಣಿಗೆಯಲ್ಲ.
ಕೆಲವರು 50-60 ಅಂತಾರೆ, 1 ಲಕ್ಷ ಅಂತಾರೆ. ಇಂತಹ ವೋಟ್ ಬಜಾರ್ ಆಗಬಾರದು. ಬಿ. ಎಸ್ ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದವರು. ಹೆಚ್. ಡಿ ಕುಮಾರಸ್ವಾಮಿ 2 ಬಾರಿ ಹಾಗೂ ಸಿದ್ದರಾಮಯ್ಯ 5 ವರ್ಷ ಸಂಪೂರ್ಣ ಅವಧಿ ಮುಖ್ಯಮಂತ್ರಿ ಆಗಿದ್ದವರು.
ನೀವು ಮತದಾರರಿಗೆ, ಜನರಿಗೆ ಪ್ರಜಾಪ್ರಭುತ್ವಕ್ಕೆ ಏನು ಸಂದೇಶ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ ಅವರು, 17 ಜನ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದಾಗ ದುಡ್ಡಿಗಾಗಿ ಮಾರಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದು, ಈಗ ನೀವು ಯಾರಿಗೆ ಮಾರುತ್ತಿದ್ದೀರಿ?, ಎಷ್ಟಕ್ಕೆ ಮಾರುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ, ಬಹುಮತದಿಂದ ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದ ಅವರು, ಪ್ರಧಾನಿ ಮೋದಿ ಹಾಗೂ ಹೆಚ್.ಡಿ ದೇವೇಗೌಡರ ಸೌಜನ್ಯ ಭೇಟಿಯನ್ನು ರಾಜಕೀಯವಾಗಿ ಮಾತನಾಡುತ್ತಾರೆ.
ಅದನ್ನು ದೊಡ್ಡ ವಿಷಯ ಮಾಡುವ ಅವಶ್ಯಕತೆ ಇಲ್ಲ. ಏಕವಚನದಲ್ಲಿ ಮಾತನಾಡುವವರು ಇದನ್ನು ನೋಡಿ ಕಲಿಯಬೇಕು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.
ಒಮಿಕ್ರೋನ್ ಭೀತಿ : ಶಾಲಾ-ಕಾಲೇಜು ವಿಚಾರದಲ್ಲಿ ಸೂಕ್ತ ಕ್ರಮಕೈಗೊಳ್ಳಿ
ಕೋವಿಡ್ನ ಹೊಸ ತಳಿ ಒಮಿಕ್ರೋನ್ ರಾಜ್ಯಕ್ಕೆ ಕಾಲಿರಿಸಿದೆ. ಈ ತಳಿ ಶೀಘ್ರವಾಗಿ ಹರಡಲಿದೆ. ಅದರಲ್ಲೂ ಮಕ್ಕಳಿಗೆ ಬೇಗ ಹರಡುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಾಲಾ-ಕಾಲೇಜು ನಡೆಯುತ್ತಿವೆ. ಶಿಕ್ಷಣ ಸಚಿವರು, ಜಿಲ್ಲಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
ಇಲ್ಲವಾದರೆ ಬಹಳ ದೊಡ್ಡ ಅನಾಹುತವಾಗಲಿದೆ. ಸರ್ಕಾರ ತಜ್ಞರ ವರದಿ ತೆಗೆದುಕೊಂಡು ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದರು. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿ, ಕುಟುಂಬ ರಾಜಕಾರಣ ಕೆಲವು ಪಕ್ಷಗಳಲ್ಲಿ ಜಾಸ್ತಿ ಇದೆ. ಇದನ್ನು ಒಮ್ಮೆಲೇ ಬದಲಾಯಿಸಲು ಸಾಧ್ಯವಿಲ್ಲ. ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬದಲಾಯಿಸಬೇಕು ಎಂದು ಹೇಳಿದರು.
ಓದಿ: ಬೆಂಗಳೂರಿನ ಒಮಿಕ್ರೋನ್ ಸೋಂಕಿತ ವೈದ್ಯರ ಪತ್ನಿಗೂ ಪಾಸಿಟಿವ್; ಮನೆ ರಸ್ತೆ ಸೀಲ್ಡೌನ್