ಮೈಸೂರು: ರಾಜಕೀಯ ಪಡಸಾಲೆಯಲ್ಲಿ ಪಟ್ಟುಬಿಡದ ಹಳ್ಳಿಹಕ್ಕಿ, ಮತ್ತೆ ವಿಧಾನಸೌಧಕ್ಕೆ ಹಾರಿ ಹೋಗುವ ಮೂಲಕ ಎದುರಾಳಿಗೆ ರಾಜಕೀಯ ಕರಗತಗಳನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ಎದುರಾಳಿಗಳಿಗೆ ತಾವೇನು ಎಂಬುದನ್ನ ತೋರಿಸಿಕೊಟ್ಟಿದ್ದಾರೆ.
ಹೌದು, ಜುಲೈ 23 ರಂದು ಸಮ್ಮಿಶ್ರ ಸರ್ಕಾರ ಪತನಗೊಂಡು ವರ್ಷ ಕಳೆಯುತ್ತಿದ್ದಂತೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಲು ಪ್ರಮುಖ ಪಾತ್ರ ವಹಿಸಿದ ಎಚ್.ವಿಶ್ವನಾಥ್ ಅವರು ಹುಣಸೂರಿನ ಉಪಚುನಾವಣೆಯಲ್ಲಿ ಸೋತ ನಂತರ ಅವರ ರಾಜಕೀಯ ಭವಿಷ್ಯವೇ ಮುಗಿಯಿತು ಎಂದು ಕೊಂಡವರಿಗೆ ಬಿಜೆಪಿ ಪಕ್ಷದ ಹೈಕಮಾಂಡ್ ತನ್ನ ಆಟದ ಮೂಲಕ ದಿಟ್ಟ ಉತ್ತರ ಕೊಟ್ಟಿದೆ.
1978ರಲ್ಲಿ ರಾಜಕೀಯ ಅಖಾಡಕ್ಕೆ ಧುಮುಕಿದ ಎಚ್.ವಿಶ್ವನಾಥ್ ಅವರು ವಿಧಾನಸಭೆ, ಲೋಕಸಭೆ ಹಾಗೂ ಉಪಚುನಾವಣೆ (ಹುಣಸೂರು) ಸೇರಿದಂತೆ 13 ಚುನಾವಣೆಗೆ ಎದುರಿಸಿದ್ದಾರೆ. ಆದರೆ, ಒಮ್ಮೆಯೂ ಮಾತ್ರ ಸತತ ಗೆಲುವನ್ನ ದಾಖಲಿಸಿಲಿಲ್ಲ. ಒಂದು ಬಾರಿ ಗೆದ್ದರೆ, ಮತ್ತೊಂದು ಬಾರಿ ಸೋಲಿನ ಪಟ್ಟಿ ಖಚಿತ.
2019ರಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ಸಮ್ಮಿಶ್ರ ಸರ್ಕಾರ ಬೀಳಲು ನಿರ್ಣಾಯಕ ಪಾತ್ರವಹಿಸಿದರು. ನಂತರ ಸಮ್ಮಿಶ್ರ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಸಾ.ರಾ.ಮಹೇಶ್ ಅವರು, ವಿಶ್ವನಾಥ್ ದುಡ್ಡಿಗೆ ಸೇಲ್ ಆಗಿದ್ದಾರೆ ಎಂದು ಆರೋಪ ಮಾಡಿದರು. ವಿಶ್ವನಾಥ್ ಅವರು ಸವಾಲು ಚಾಮುಂಡೇಶ್ವರಿ ಸನ್ನಿಧಿ ಮುಂದೆ ಆಣೆ - ಪ್ರಮಾಣ ಡ್ರಾಮಾ ಜೋರಾಗಿ ನಡೆಯಿತು. ಆದರೆ, ಇಬ್ಬರು ದೇವರ ಮೇಲೆ ಆಣೆ ಮಾಡಲಿಲ್ಲ. ಬಂದ ದಾರಿಗೆ ಮರಳಿ ಹೋದರು.
ಕಾಂಗ್ರೆಸ್ ನಲ್ಲಿ ಸುದೀರ್ಘ ಕಾಲ ರಾಜಕೀಯ ಮಾಡಿದ ವಿಶ್ವನಾಥ್, ಸಿದ್ದರಾಮಯ್ಯ ಅವರ ಮೇಲಿನ ಮುನಿಸಿನಿಂದ ಜೆಡಿಎಸ್ ಸೇರಿದರು. ಅಲ್ಲಿಯೂ ನನಗೆ ಬಯಸಿದ್ದು ಸಿಗಲಿಲ್ಲ ಎಂದು ಬಿಜೆಪಿ ಸೇರ್ಪಡೆಗೊಂಡು, ಉಪಚುನಾವಣೆಯಲ್ಲಿ ಸೋತರು. ನಂತರ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಶಾ, ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಮುಖಂಡರ ಹಾಡಿ ಹೊಗಳಿದ ಪರಿಣಾಮ ವಿಶ್ವನಾಥ್ ಗೆ ಸಾಹಿತ್ಯ ಕ್ಷೇತ್ರದಲ್ಲಿ ವಿಧಾನ ಪರಿಷತ್ ಸ್ಥಾನ ದಕ್ಕಿದೆ.