ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಾನು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ, ಅವರ ಶಕ್ತಿ ಕೇಂದ್ರದ ಆಡಳಿತದ ಬಗ್ಗೆ ನಾನು ಟೀಕೆ ಮಾಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸ್ಪಷ್ಟಪಡಿಸಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸೌಧ/ಶಕ್ತಿಕೇಂದ್ರದಲ್ಲಿನ ಪೀಠದ ಜವಾಬ್ದಾರಿಯನ್ನು ಎಚ್ಚರಿಸಿದ್ದೇನೆಯೇ ಹೊರತು ವೈಯುಕ್ತಿಕ ಟೀಕೆ ಮಾಡಿಲ್ಲ. ಸಚಿವ ಸೋಮಶೇಖರ್‌ಗೆ ಇದೆಲ್ಲ ಗೊತ್ತಿಲ್ವಾ?, ತಮ್ಮ ವಿರುದ್ಧ ಟೀಕೆ ಮಾಡಿದ ಎಂಪಿ, ಸಚಿವರು ಹಾಗೂ ಶಾಸಕರ ವಿರುದ್ಧ ಟೀಕಿಸಿದರು. ಎಂಎಲ್‌ಸಿ ಮಾಡಿದ್ದೇ ದೊಡ್ಡದು ಎನ್ನುವುದಾದ್ರೆ ಸರ್ಕಾರ ತಂದವರು ಯಾರು? ನನ್ನ ತ್ಯಾಗ ಏಕೆ ನೆನೆಸಲ್ಲ ಎಂದು ಪ್ರಶ್ನಿಸಿದರು.
ಎಸ್.ಆರ್.ವಿಶ್ವನಾಥ್ ಭೂಗಳ್ಳ: ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಒಬ್ಬ ನೆಲಗಳ್ಳ. ಸರ್ಕಾರಿ ಜಾಗಕ್ಕೆ ಬೇಲಿ ಹಾಕುವ ಭೂಗಳ್ಳ. ನನ್ನ ರಾಜಕೀಯ ಚರಿತ್ರೆ ಏನು? ನೆಲಗಳ್ಳನ ಚರಿತ್ರೆ ಏನು ಎಂದು ಅವರ ವಿರುದ್ಧ ಗರಂ ಆದರು.
ಚಾಮರಾಜನಗರ ದುರಂತ ಒಂದು ಕೊಲೆ: ಇಬ್ಬರು ಡಿಸಿಗಳಿಗೆ ಶಟ್ಅಪ್ ಅಂತಾ ಹೇಳುವ ಧೈರ್ಯ ಸಿಎಂಗೆ ಇಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮರ್ಯಾದೆ ಹೋಗಿದೆ. ನಾನೊಬ್ಬ ವಿಧುರನಾಗಿ ದೃತರಾಷ್ಟ್ರನಿಗೆ ಬುದ್ಧಿ ಹೇಳಿದ್ದೇನೆ. ಶಕುನಿಗಳನ್ನು, ಮೆಚ್ಚಿಸುವವರನ್ನ ನಂಬಬೇಡಿ. ಬಿಎಸ್‌ವೈ ಪುತ್ರ ವಾತ್ಸಲ್ಯ ಬಿಡಬೇಕು. ಅಂದು ವಿಧುರ ಕುರುಕ್ಷೇತ್ರ ಯುದ್ಧ ಬೇಡ ಅಂತಾ ಹೇಳಿದ್ದ. ವಿಧುರನ ಸ್ಥಾನದಲ್ಲಿ ನಿಂತು ನಾನು ಮಾತನಾಡಿದ್ದೇನೆ ಎಂದರು.
ಸಿಎಂಗೆ ಖಂಡಾತುಂಡವಾಗಿ ಅಧಿಕಾರ ನಡೆಸಿ ಎಂದು ಹೇಳಿದ್ದೇ ತಪ್ಪಾ? ಮಠಮಾನ್ಯಗಳಿಗೆ ನೂರಾರು ಕೋಟಿ ರೂ. ಕೊಟ್ಟಿದ್ದಾರೆ. ಈಗ ಜನರಿಗೆ ಅನ್ನ ನೀರು ಕೊಡಿ ಅಂತ ಯಾಕೆ ಕೇಳ್ತಿಲ್ಲ. ಸಿಎಂ ಸರ್ಕಾರದ ಖಜಾನೆಯಿಂದ ಧರ್ಮಪೀಠಗಳಿಗೆ ಹಣ ಕೊಟ್ಟಿದ್ದಾರೆ. ಈಗ ಅವರ ಸಹಕಾರ ತೆಗೆದುಕೊಳ್ಳಲಿ, ಜೊತೆಯಾಗಿ ಕೋವಿಡ್ ನಿಯಂತ್ರಿಸಲಿ ಎಂದು ಸಲಹೆ ಇಟ್ಟಿದ್ದಾರೆ.
ಸಂಪೂರ್ಣ ಲಾಕ್‌ಡೌನ್ ಮಾಡುವ ಸಿಎಂ ಹೇಳಿಕೆ ಸ್ವಾಗತಾರ್ಹ: ಸಿಎಂ ಹೇಳಿಕೆ ಸಂಪೂರ್ಣ ಜಾರಿಗೆ ತರಬೇಕು. ಭಾರತ ಇಂದು ವಿದೇಶದ ಮಾಧ್ಯಮಗಳ ಮುಂದೆ ಬೆತ್ತಲಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ವಿಫಲವಾಗಿವೆ ಎಂದು ಹೇಳಿದರು.
ಬೆಳಗಾವಿ ಶಾಸಕರ ಒತ್ತಾಯದಂತೆ ಸುವರ್ಣಸೌಧವನ್ನು ಕೋವಿಡ್ ಕೇರ್‌ಗೆ ಬಳಸಿಕೊಳ್ಳಿ. ಸುವರ್ಣ ಸೌಧದಲ್ಲಿ ಎರಡು ಸಾವಿರ ಬೆಡ್ ಹಾಕಬಹುದು. ತಾತ್ಕಾಲಿಕ ಬೆಡ್‌ಗಳ ವ್ಯವಸ್ಥೆ ಮಾಡಿ, ಅಗತ್ಯ ಬಿದ್ರೆ ಮುಂದುವರೆಸಿ ಎಂದು ತಿಳಿಸಿದರು.
ಇದನ್ನೂ ಓದಿ: ಸಿಎಂಗೆ ಕಣ್ಣು ಕಾಣಿಸೋದಿಲ್ಲ, ಕಿವಿನೂ ಕೇಳಿಸಲ್ಲ, ನಿಮ್ಮನ್ನ ಕಟ್ಟಿಕೊಂಡು ನಾವೇನು ಮಾಡೋಣ : ಹೆಚ್ ವಿಶ್ವನಾಥ್ ಕಿಡಿ
ಖಾಸಗಿ ಆಸ್ಪತ್ರೆಗಳು ಯಾರ ನಿಯಂತ್ರಣದಲ್ಲಿಲ್ಲ. ಸರ್ಕಾರಕ್ಕೆ ಗರ ಬಡಿದಿದೆಯಾ. ಆಂಧ್ರ, ತೆಲಂಗಾಣ ಮಾದರಿಯಲ್ಲಿ ಕೋವಿಡ್ ಚಿಕಿತ್ಸೆ ಕೊಡಿ. ಸರ್ಕಾರವೇ ಚಿಕಿತ್ಸಾ ದರ ನಿಗದಿ ಮಾಡಲಿ. ಸಿಎಂ ಧೈರ್ಯವಾಗಿ ಅಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದರು.