ಮೈಸೂರು: ಬೆಂಗಳೂರು- ಮೈಸೂರು ದಶಪಥ ಎಕ್ಸ್ಪ್ರೆಸ್ ಹೈವೇ ಕಾಮಗಾರಿ ಇನ್ನೂ ಸಂಪೂರ್ಣವಾಗಿಲ್ಲ, ಅರ್ಧಂಬರ್ಧ ಆಗಿರುವ ಕಾಮಗಾರಿಯನ್ನು ಉದ್ಘಾಟಿಸಿ, ದುಬಾರಿ ಟೋಲ್ ನಿಗದಿ ಮಾಡಲಾಗಿದೆ. ಇದನ್ನು ವಿರೋಧಿಸಿ ಮೈಸೂರಿನ ಆರಂಭಿಕ ಹೆದ್ದಾರಿಯಲ್ಲಿ ಮಾರ್ಚ್ 17 ರಂದು ಶಾಂತಿಯುತ ಪ್ರತಿಭಟನೆ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಘಟನೆಗಳು ಹಾಗೂ ಎಲ್ಲಾ ಸಾರ್ವಜನಿಕರು ಈ ಶಾಂತಿಯುತ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಯಾರು ಬರದಿದ್ದರು ನಾನೊಬ್ಬನೇ ಏಕಾಂಗಿಯಾಗಿ ಸಾಂಕೇತಿಕವಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತೇನೆ ಎಂದು ವಿಶ್ವನಾಥ್ ತಿಳಿಸಿದರು.
ಬೆಂಗಳೂರು -ಮೈಸೂರು ನಡುವಿನ ಹೈವೇ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಈಗಾಗಲೇ ಅಪಘಾತಗಳಲ್ಲಿ 90ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಜೊತೆಗೆ ಕಾಮಗಾರಿ ಪೂರ್ಣಗೊಳ್ಳದೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದ್ದು ಸರಿಯಲ್ಲ, ಆದರೂ ಅವರು ಮಾಡಿದ್ದೇ ಸರಿಯೆಂದು ಹೇಳುತ್ತಿದ್ದಾರೆ. ಈ ಹೈವೇ ಕಾಮಗಾರಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಒಡೆತನದ ಸಂಸ್ಥೆಗಳು ಜನರನ್ನು ಲೂಟಿ ಮಾಡುತ್ತಿವೆ ಎಂದು ಆರೋಪಿಸಿದರು.
ಹೈವೇಯಿಂದ ಬೀದಿಗೆ ಬಿದ್ದ ಕುಟುಂಬಗಳು: ಬೆಂಗಳೂರು- ಮೈಸೂರು ನಡುವಿನ ಎಕ್ಸ್ಪ್ರೆಸ್ ಹೈವೇ ನಿರ್ಮಾಣದಿಂದ ಹಳೇ ಮಾರ್ಗದಲ್ಲಿ ಇದ್ದ 200 ಹೋಟೆಲ್‌ಗಳು, 90 ಪೆಟ್ರೋಲ್ ಬಂಕ್ಗಳು ಹಾಗೂ ರಸ್ತೆ ಬದಿಯ ವ್ಯಾಪಾರಸ್ಥರ ಬದುಕು ಬೀದಿಗೆ ಬಿದ್ದಿದೆ. ಚನ್ನಪಟ್ಟಣದ ಬೊಂಬೆಗಳು ಮಾರುಕಟ್ಟೆ ಇಲ್ಲದೆ ನಷ್ಟ ಅನುಭವಿಸುವಂತಾಗಿದೆ. ಶ್ರೀ ರಂಗಪಟ್ಟಣ, ಮಂಡ್ಯ, ಚನ್ನಪಟ್ಟಣ, ಮದ್ದೂರು ಸೇರಿದಂತೆ ಹಳೆಯ ಹೈವೇ ಪಕ್ಕದಲ್ಲಿ ಇದ್ದ ವ್ಯಾಪಾರ ವಹಿವಾಟುಗಳು ಸಂಪೂರ್ಣವಾಗಿ ಮುಚ್ಚಿದ್ದು ಜನರ ಬದುಕು ಬೀದಿಗೆ ಬಿದ್ದಿದೆ ಎಂದು ವಿಶ್ವನಾಥ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದರು.
ನಾನು ಸಹ ಪ್ರಾಯಶ್ಚಿತ ಮಾಡಿಕೊಳ್ಳಬೇಕಾಗಿದೆ : ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ಭಾರಿ ನಿರೀಕ್ಷೆ ಇಟ್ಟು ತರಲಾಯಿತು. ಆದರೆ ಈಗ ಬಿಜೆಪಿಯನ್ನು ಅಧಿಕಾರಕ್ಕೆ ತಂದ ತಪ್ಪಿಗೆ ನಾನು ಸಹ ಪ್ರಾಯಶ್ಚಿತ ಮಾಡಿಕೊಳ್ಳಬೇಕಾಗಿದೆ. ಹೈವೇ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದ್ದು, ಹೈವೇಯನ್ನು ಪ್ರಧಾನಿ ನರೇಂದ್ರ ಮೋದಿ, ಸಂಸದ ಪ್ರತಾಪ್ ಸಿಂಹ ನಾವು ಮಾಡಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇವರು ಅವರ ಮನೆಯಿಂದ ಹಣ ತಂದು ಹೈವೇ ಮಾಡಿಸಿಲ್ಲ, ಜನರ ತೆರಿಗೆ ಹಣದಿಂದ ಹೈವೇ ನಿರ್ಮಾಣವಾಗಿದೆ ಎಂದು ವಿಶ್ವನಾಥ್ ಗುಡುಗಿದರು.
ಈ ಹೈವೇ ಕಾಮಗಾರಿಯಿಂದ ಸಂಸದ ಪ್ರತಾಪ್ ಸಿಂಹ ದುಡ್ಡು ಮಾಡಿಕೊಂಡಿದ್ದಾನೆ. ಆದರೂ, ಸತ್ಯಹರಿಶ್ಚಂದ್ರನ ರೀತಿ ಮಾತನಾಡುತ್ತಾನೆ. ಪ್ರತಾಪ್ ಸಿಂಹ ಎಷ್ಟು ಲೂಟಿ ಮಾಡಿದ್ದಾನೆ ಎಂಬುದನ್ನು, ಅವನು ಮೈಸೂರಿನಲ್ಲಿ ಕಟ್ಟುತ್ತಿರುವ ಬಂಗಲೆ ನೋಡಿದರೆ ಗೊತ್ತಾಗುತ್ತದೆ. ಈತ ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ಗೊತ್ತಾಗುವುದಿಲ್ಲ ಎಂದುಕೊಂಡಿದ್ದಾನೆ. ಸಂಸದ ಪ್ರತಾಪ್ ಸಿಂಹಗೆ ಮಾನ ಮರ್ಯಾದೆ ಏನು ಇಲ್ಲ ಎಂದು ಏಕವಚನದಲ್ಲೇ ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಧ್ರುವನಾರಾಯಣ್ ಪುತ್ರನಿಗೆ ಟಿಕೆಟ್ ನೀಡಿ: ಇತ್ತೀಚೆಗೆ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಪುತ್ರ ದರ್ಶನ್ಗೆ, ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಬೇಕು. ಧ್ರುವನಾರಾಯಣ್ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ತುಂಬಾ ಶ್ರಮಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅವರ ಕುಟುಂಬದ ಜೊತೆ ಇದೆ ಎಂಬ ಸಂದೇಶವನ್ನು ರವಾನಿಸಲು, ಅವರ ಮಗ ವಕೀಲ ದರ್ಶನ್ಗೆ ಟಿಕೆಟ್ ನೀಡಬೇಕು. ಈಗಾಗಲೇ ರಾಜಕೀಯದಲ್ಲಿ ರಿಯಲ್ ಎಸ್ಟೇಟ್ ನವರು, ರೌಡಿ ಶೀಟರ್ ಹಿನ್ನೆಲೆ ಉಳ್ಳವರು ಹೆಚ್ಚಾಗಿದ್ದಾರೆ. ಇಂತಹ ಸಂದರ್ಭದಲ್ಲಿ ದರ್ಶನ್ ಅಂತ ಯುವಕರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು ಎಂದು ವಿಶ್ವನಾಥ್ ಒತ್ತಾಯಿಸಿದರು.
ಇದನ್ನೂ ಓದಿ:ನೇರ ಪಾವತಿ ಪಡೆಯುತ್ತಿರುವ 11,133 ಪೌರ ಕಾರ್ಮಿಕರ ಸೇವೆ ಖಾಯಂ: ಎಂ.ಕೋಟೆ ಶಿವಣ್ಣ