ಮೈಸೂರು: ಸಿಎಂ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡಿದ್ದಕ್ಕೆ ರೈತನೊಬ್ಬ ಒಂದು ಎಕರೆಯಲ್ಲಿ ಬೆಳೆದಿದ್ದ ಸಿಲ್ವರ್ ಗಿಡ ಕತ್ತರಿಸಿ ಹಾಕಿದ್ದಾನೆ. ರೈತನ ವಿಡಿಯೋ ಜೆಡಿಎಸ್ ಯುವ ಬ್ರಿಗೇಡ್ ನಾಗಮಂಗಲ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಆಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
ದೊಡ್ಡ ಹೈಡ್ರಾಮದ ನಂತರ ರಾಜ್ಯದಲ್ಲಿ ವಿಶ್ವಾಸ ಮತ ಕಳೆದುಕೊಂಡ ಸಮ್ಮಿಶ್ರ ಸರ್ಕಾರ ಕುಸಿದು ಸಿಎಂ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ವತ: ರೈತನೇ ವಿಡಿಯೋದಲ್ಲಿ ಗಿಡ ಕಡಿದು ಹಾಕಲು ಕಾರಣ ಹೇಳಿದ್ದು, ಕುಮಾರಸ್ವಾಮಿ ರಾಜೀನಾಮೆ ಕೊಟ್ಟರೆ ಬೆಳಗ್ಗೆಯಷ್ಟರಲ್ಲಿ ಒಂದು ಎಕರೆಯಲ್ಲಿರುವ ಸಿಲ್ವರ್ ಗಿಡ ಕತ್ತರಿಸಿ ಹಾಕುವುದಾಗಿ ಚಾಲೆಂಜ್ ಮಾಡಿದ್ದೆ. ಹೀಗಾಗಿ ಮರಗಳನ್ನು ಕತ್ತರಿಸಿ ಹಾಕಿರುವುದಾಗಿ 18 ಸೆಕೆಂಡ್ ಇರುವ ವಿಡಿಯೋದಲ್ಲಿ ತಿಳಿಸಿದ್ದಾನೆ.
ಇನ್ನೂ ಮಾತು ಮುಂದುವರಿಸಿರುವ ರೈತ ಅಂತಹವರನ್ನೇ ಅಧಿಕಾರದಿಂದ ಇಳಿಸಿದಾಗ ದೇಶದಲ್ಲಿ ಇನ್ಯಾರು ಆಡಳಿತ ನಡೆಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಜಮೀನಿನಲ್ಲಿ ನಿಂತಿರುವ ರೈತ ಕೈಯಲ್ಲಿ ಮಚ್ಚು ಹಿಡಿದು ನಿಂತಿದ್ದು, ಆತನ ಸುತ್ತಲು ಕತ್ತರಿಸಿರುವ ಸಿಲ್ವರ್ ಗಿಡಗಳಿವೆ. ಘಟನೆಯನ್ನು ಕಂಡ ಕುಮಾರಸ್ವಾಮಿ ಅಭಿಮಾನಿಗಳು ತೀವ್ರ ಬೇಸರಗೊಂಡಿದ್ದು, ನಿಮ್ಮ ಈ ರೀತಿಯ ನಡೆಯಿಂದ ಕುಮಾರಸ್ವಾಮಿಯವರಿಗೆ ಮತ್ತಷ್ಟು ನೋವು ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಇನ್ನೂ ವಿಡಿಯೋದಲ್ಲಿರುವ ರೈತನ ಹೆಸರಾಗಲಿ,ಊರಾಗಾಲಿ ತಿಳಿದು ಬಂದಿಲ್ಲ.