ಮೈಸೂರು: ಹೊಸ ವರ್ಷಾಚರಣೆಗೆ ಮೈಸೂರು ನಗರದಲ್ಲಿ ರಾತ್ರಿ 1 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ನಿಗದಿಪಡಿಸಿರುವ ಸಮಯವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಅಂದು ರಾತ್ರಿ 7 ಗಂಟೆಗೆ ಚಾಮುಂಡಿ ಬೆಟ್ಟದ ಮುಖ್ಯದ್ವಾರವನ್ನು ಬಂದ್ ಮಾಡಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಹಾಗೂ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಮಾತನಾಡಿದ ಅವರು, ಸರ್ಕಾರ ನಿಗದಿಪಡಿಸಿರುವ ಸಮಯವನ್ನು ಪಾಲಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂ ಸ್ಟೇ, ಸರ್ವಿಸ್ ಅಪಾರ್ಟ್ಮೆಂಟ್, ಅಪಾರ್ಟ್ಮೆಂಟ್ ಅಸೋಸಿಯೇಷನ್, ಮಾಲ್, ಸಂಘ ಸಂಸ್ಥೆಗಳು ರಾತ್ರಿ ಒಂದು ಗಂಟೆಗೆ ಕಾರ್ಯಕ್ರಮ ಮುಗಿಸುವುದು ಕಡ್ಡಾಯ ಎಂದರು.
275 ಸಿಸಿಟಿವಿ ಅಳವಡಿಕೆ: ನ್ಯೂಇಯರ್ ನೆಪದಲ್ಲಿ ಅಸಭ್ಯ ವರ್ತನೆ ತಡೆಯಲು 36 ವಿಶೇಷ ಕಾರ್ಯಪಡೆ ತಂಡ ರಚನೆ ಮಾಡಲಾಗಿದೆ. ಮಹಿಳೆಯರ ರಕ್ಷಣೆಗಾಗಿ 8 ಸುರಕ್ಷತಾ ಪಿಂಕ್ ಗರುಡಾ (ಚಾಮುಂಡಿ ಪಡೆ) ರಚಿಸಲಾಗಿದೆ. ನಗರದ ಪ್ರಮುಖ ಸ್ಥಳದಲ್ಲಿ ಶ್ವಾನದಳ ಮತ್ತು ವಿಧ್ವಂಸಕ ಕೃತ್ಯ ತಡೆಗಾಗಿ 4 ತಂಡಗಳನ್ನು ರಚಿಸಲಾಗಿದೆ. ನಗರದಲ್ಲಿರುವ 59 ಸಿಸಿಟಿವಿ ಜೊತೆಗೆ 275 ಸಿಸಿಟಿವಿ ಅಳವಡಿಕೆ, ಪೊಲೀಸ್ ಕಂಟ್ರೋಲ್ ರೂಂ ಮೂಲಕ ಕಣ್ಗಾವಲು, ವೀಲಿಂಗ್, ಸ್ಪೀಡ್, ಕರ್ಕಶ ಶಬ್ದ, ಕುಡಿದು ವಾಹನ ಚಾಲನೆ ತಡೆಗಾಗಿ ಸಂಚಾರ ಪೊಲೀಸರು ತಜ್ಞರನ್ನೊಳಗೊಂಡ ಕ್ಷಿಪ್ರ ಪಡೆ ರಚಿಸಲಾಗಿದೆ.
ರಿಂಗ್ ರೋಡ್‌ನಲ್ಲಿ 8 ಹೈವೇ ಪೆಟ್ರೋಲ್ ವಾಹನ ನಿಯೋಜನೆ, ಒಟ್ಟು 18 ಗರುಡಾ ವಾಹನಗಳ ಗಸ್ತು, ನಗರದ ಹೊರವಲಯದಲ್ಲಿ 12 ಕಡೆ ಚೆಕ್ಪೋಸ್ಟ್, ನಗರದ ಒಳ ಭಾಗದಲ್ಲಿ 18 ಕಡೆ ಚೆಕ್‌ಪೊಸ್ಟ್ ನಿರ್ಮಿಸಿ ಕಿಡಿಗೇಡಿಗಳ ಮೇಲೆ ನಿಗಾ ಇಡಲಾಗುತ್ತದೆ. ಹೊಸ ವರ್ಷ ಆಚರಣೆಯ ಕಾರ್ಯಕ್ರಮ ಆಯೋಜನೆಗಾಗಿ ಪೊಲೀಸ್ ಆಯುಕ್ತರ ಕಚೇರಿಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.
ವಿಶೇಷ ಪೊಲೀಸ್ ಪಡೆಗಳ ನಿಯೋಜನೆ: ಧ್ವನಿವರ್ಧಕ ಅಳವಡಿಸುವುದು ಆಯಾ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಬೇಕು. ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ಅಶ್ಲೀಲ ಅರೆಬೆತ್ತಲೆ ನೃತ್ಯ, ಮಾದಕ ವಸ್ತುಗಳ ಸೇವನೆ, ಜೂಜಾಟ ನಿಷೇಧ ಮಾಡಲಾಗಿದೆ. ಬಂದೋಬಸ್ತ್‌ಗಾಗಿ 3 ಡಿಸಿಪಿ, 12 ಎಸಿಪಿ, 30 ಪಿಐ, 70 ಎಎಸ್ಪಿ, ಹೆಚ್‌ಸಿ/ಪಿಸಿ ಕ್ರಮವಾಗಿ 550, 80 ಸಿಬ್ಬಂದಿ, ಸಿಎಆರ್ 12 ತುಕಡಿ, ಕೆಎಸ್ಆರ್ಪಿ 4 ತಂಡ, ಕಮಾಂಡೋ ಪಡೆ 4, ಶ್ವಾನದಳ 4 ತಂಡ, ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ರಾತ್ರಿ 9 ಗಂಟೆಗೆ ಚಾಮುಂಡಿ ಬೆಟ್ಟದ ಗೇಟ್ ಬಂದ್: ಚಾಮುಂಡಿ ಬೆಟ್ಟಕ್ಕೆ 31ರ ಸಂಜೆ 7ರವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿ 9ಗಂಟೆಗೆ ತಾವರೆಕಟ್ಟೆ ಗೇಟ್ ಬಂದ್ ಮಾಡಲಾಗುವುದು. ಬೆಟ್ಟದಲ್ಲಿ ವಾಸಿಸುವ ಜನರಿಗೆ ಇದು ಅನ್ವಯಿಸುವುದಿಲ್ಲ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಹೀಗಿರಲಿದೆ ಬೆಂಗಳೂರು..! ಪೊಲೀಸರಿಂದ ಭದ್ರತಾ ಕ್ರಮ ಆರಂಭ