ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ 'ಆಪ್ತಮಿತ್ರ' ಎಂಬ ಸಹಾಯವಾಣಿಯನ್ನು ಲೋಕಾರ್ಪಣೆಗೊಳಿಸಲಿದ್ದು, ಇದರಿಂದ ಸಾರ್ವಜನಿಕರು ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಪಡೆದುಕೊಳ್ಳಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಇನ್ಫೋಸಿಸ್ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಆಪ್ತಮಿತ್ತ ಎಂಬ ಸಹಾಯವಾಣಿಯನ್ನು ಆರಂಭಿಸುತ್ತಿದೆ. ಈ ಕೇಂದ್ರದಲ್ಲಿ ವೈದ್ಯಕೀಯ ಕ್ಷೇತ್ರದ ಪರಿಣಿತರು, ವೈದ್ಯರು, ನರ್ಸ್ಗಳು ಸೇರಿದಂತೆ 2 ಸಾವಿರ ಮಂದಿ ಕೆಲಸ ಮಾಡುತ್ತಾರೆ. 14410 ಈ ಸಹಾಯವಾಣಿಗೆ ರಾಜ್ಯದ ಯಾವುದೇ ಮೂಲೆಯಿಂದ ಕರೆ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದರು.
ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ. 54,396 ಆಸ್ಪತ್ರೆಗಳನ್ನು ಕೋವಿಡ್-19ಗಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಸಜ್ಜಾಗಿದೆ ಎಂದರು.
ಕೋವಿಡ್-19 ವಿರುದ್ಧ ಸೇನಾನಿಗಳಂತೆ ಹೋರಾಟ ಮಾಡುತ್ತಿರುವ ವೈದ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಸದ್ಯಕ್ಕೆ ಏನೂ ಕೊಡಲು ಸಾಧ್ಯವಿಲ್ಲ. ರಾಜ್ಯ ಹಾಗೂ ದೇಶ ಆರ್ಥಿಕ ಸಂಕಷ್ಟದಲ್ಲಿದೆ. ಮುಂದಿನ ದಿನಗಳಲ್ಲಿ ನೋಡೋಣ ಎಂದರು.