ಮೈಸೂರು: ಗ್ರಾಮ ಪಂಚಾಯತಿ ಮಹಿಳಾ ಅಧ್ಯಕ್ಷೆಗೆ ಸದಸ್ಯನೊಬ್ಬ ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ ಘಟನೆ ಹೊಸಹುಂಡಿ ಗ್ರಾಮ ಪಂಚಾಯತಿಯಲ್ಲಿ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜಿಲ್ಲೆಯ ಹೊಸಹುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಳಿನಿ ಎಂಬುವರು ಪಂಚಾಯತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ನಡೆಸದೆ ಭೇದ ಭಾವ ಮಾಡುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯ ಸೋಮಣ್ಣ ಎಂಬುವರು ಆರೋಪ ಮಾಡಿದ್ದರು. ಈ ವಿಚಾರವಾಗಿ ಪಂಚಾಯತಿ ಕಚೇರಿಯೊಳಗೆ ಮಹಿಳಾ ಅಧ್ಯಕ್ಷೆ ಹಾಗೂ ಸೋಮಣ್ಣ ನಡುವೆ ಮಾತಿನ ಚಕಮಕಿ ನಡೆದಿದ್ದು, ಸದಸ್ಯ ಸೋಮಣ್ಣ ತನ್ನ ಚಪ್ಪಲಿಯಿಂದ ಅಧ್ಯಕ್ಷೆಗೆ ಹೊಡೆಯಲು ಮುಂದಾದರು. ಈ ವೇಳೆ ಅಲ್ಲಿದ್ದ ಇತರೆ ಸದಸ್ಯರು ಇಬ್ಬರನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದ ಸಂದರ್ಭದಲ್ಲೆ ಅಧ್ಯಕ್ಷೆ ಕೂಡ ಸಿಟ್ಟಿನಿಂದ ಸದಸ್ಯನ ಟವೆಲ್ ಎಳೆದು ಹಲ್ಲೆಗೆ ಮುಂದಾಗಿದ್ದಾರೆ.
ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರೆ, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಸದ್ಯ ಇದರ ಸಿಸಿಟಿವಿ ದೃಶ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.