ಮೈಸೂರು: ಪಡಿತರ ವ್ಯವಸ್ಥೆಗೆ ರಾಜ್ಯದ ರೈತರಿಂದಲೇ ಆಹಾರೋತ್ಪನ್ನಗಳನ್ನು ಖರೀದಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮನವಿ ಮಾಡಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪಡಿತರ ವ್ಯವಸ್ಥೆಗೆ ಬೇಕಾದ ಭತ್ತ, ರಾಗಿ, ಜೋಳ, ಎಣ್ಣೆ ಕಾಳುಗಳನ್ನು ಪೂರೈಸಲು ರೈತರು ಸಿದ್ಧವಿದ್ದು, ಸರ್ಕಾರ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯಲ್ಲಿ ಕೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಾಧ್ಯತೆಗಳ ಬಗ್ಗೆ ಚರ್ಚಿಸಲು ಕರ್ನಾಟಕ ರಾಜ್ಯ ರೈತ ಸಂಘದ ಯುವ ಘಟಕ ಜು.23 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಪರಿಣತರಿಂದ ಸಂವಾದ ಕಾರ್ಯಕ್ರಮವನ್ನು ನಡೆಸಲಿದೆ. ರೈತರು, ವ್ಯಾಪಾರಸ್ಥರು ಮತ್ತು ಪರಿಣಿತರ ಸಭೆಯನ್ನು ಕರೆದು ಚರ್ಚಿಸಿ ಈ ಸಂಬಂಧ ಮುಖ್ಯಮಂತ್ರಿಗಳು ಸ್ಪಷ್ಟ ನಿರ್ಧಾರಕ್ಕೆ ಬರಬೇಕು ಎಂದು ಮನವಿ ಮಾಡಿದರು. ಜತೆಗೆ ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಮಾಡಿ ರೈತರನ್ನು ರಕ್ಷಿಸಬೇಕು ಎಂದರು. ಜು. 21 ರಂದು ರೈತ ಹುತಾತ್ಮರ ದಿನಾಚರಣೆ ಮತ್ತು ರೈತ ಚಳವಳಿಯ ಮುಂದಿನ ಹೋರಾಟ ಘೋಷಣಾ ಸಮಾವೇಶ ಧಾರವಾಡದ ಎಂ.ಜಿ. ಹಿರೇಮಠ ಕಲ್ಯಾಣ ಮಂಟಪದಲ್ಲಿ ರೈತ ಸಂಘ ಆಯೋಜಿಸಲಿದೆ ಎಂದು ಇದೇ ವೇಳೆ, ಬಡಗಲಪುರ ನಾಗೇಂದ್ರ ಮಾಹಿತಿ ನೀಡಿದರು.
ಬಜೆಟ್ ಸಮತೋಲನ ಕಾಯ್ದುಕೊಂಡಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಗ್ಯಾರಂಟಿಗಳ ಜಾರಿಗಾಗಿ ಆದ್ಯತೆ ನೀಡಿದ್ದರೂ ಸಮತೋಲನವನ್ನು ಕಾಯ್ದುಕೊಂಡಿದೆ. ಗ್ಯಾರಂಟಿಗಳ ಜಾರಿಗಾಗಿ, ಮೊದಲನೆ ಆದ್ಯತೆ ನೀಡಿರುವುದರಿಂದ ಬೇರೆ ಕ್ಷೇತ್ರಗಳಿಗೆ ಅನುದಾನ ಕಡಿಮೆ ಆಗಿದೆ. ಈ ನಡುವೆ ಯಾವುದೇ ಹೊಸ ಸರ್ಕಾರಕ್ಕೆ ಹಲವಾರು ಸವಾಲುಗಳು ಇರುತ್ತವೆ. ಸವಾಲುಗಳ ನಡುವೆಯು ಈ ಬಜೆಟ್ ಸಮತೋಲನ ಕಾಯ್ದುಕೊಂಡಿದೆ. ಸಂಪನ್ಮೂಲ ಕ್ರೂಢೀಕರಿಸಲು ಕೂಡ ಆದ್ಯತೆ ನೀಡಿದ್ದು, ಅನುತ್ಪಾದಕ ವೆಚ್ಚಕ್ಕೆ ಕಡಿವಾಣ ಹಾಕಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದೆ ಎಂದರು.
ರೈತ ಸ್ನೇಹಿ ನೀತಿಗಳನ್ನು ರೂಪಿಸಿ: ಎಪಿಎಂಸಿ ಕಾಯ್ದೆಯನ್ನು ವಾಪಸ್ ಪಡೆಯಲು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಎಪಿಎಂಸಿಯನ್ನು ಮತ್ತುಷ್ಟು ಬಲಪಡಿಸಿ ರೈತ ಸ್ನೇಹಿ ನೀತಿಗಳನ್ನು ರೂಪಿಸಬೇಕು. ಕೃಷಿ ಕ್ಷೇತ್ರಕ್ಕೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಸಾಲ ನೀಡುವ ಯೋಜನೆ ಕೂಡ ಸ್ವಾಗತಾರ್ಹ. ಒಟ್ಟಾರೆ ಮೊತ್ತ ಏರಿಸದೇ ಇದ್ದರೆ 5 ಲಕ್ಷ ಸಾಲ ಹೆಚ್ಚು ಜನಕ್ಕೆ ದೊರೆಯುವುದಿಲ್ಲ. ಕೃಷಿ ಉತ್ಪನ್ನಗಳಿಗೆ ನವೋದ್ಯಮ ಸ್ಪರ್ಶ ಒಳ್ಳೆಯದು. ಆದರೆ ಇದಕ್ಕೆ ನೀಲಿ ನಕ್ಷೆ ಬೇಕು ಎಂದು ಹೇಳಿದರು.
ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ಅಧಿಕಾರ ನೀಡಿ ಸಬಲೀಕರಣ ಮಾಡಬೇಕಿತ್ತು. ಕೃಷಿ ಉತ್ಪನ್ನಗಳಿಗೆ ರಾಜ್ಯ ಸರ್ಕಾರವೇ ಬೆಲೆ ನಿರ್ಧಾರ ಮಾಡಬೇಕಿತ್ತು. ಕೊಟ್ಟ ಮಾತಿನಂತೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕಾಯ್ದೆ ಹಾಗೂ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಬೇಕಿತ್ತು. ಯಾವ ಯಾವ ವಿಚಾರಗಳು ಈ ಬಜೆಟ್ನಲ್ಲಿ ಪ್ರಸ್ತಾಪವಾಗಿಲ್ಲ, ಮುಂದಿನ ದಿನಗಳಲ್ಲಿ ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಈ ಸಂಬಂಧ ಸದ್ಯದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: Annabhagya scheme: ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಗೆ ಸಿಎಂ ಚಾಲನೆ.. ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ