ಮೈಸೂರು: ಮೀಸಲಾತಿ ಹೆಚ್ಚಳ ಹಾಗೂ ಅದರ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ ಎಂದು ಕಾಣಿಸುತ್ತದೆ. ಈ ಬಗ್ಗೆ ಸರ್ಕಾರ ಸ್ಪಷ್ಟತೆ ನೀಡಬೇಕು ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿಕೆ ನೀಡಿದ್ದಾರೆ.
ಇಂದು ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಲಕ್ಷಣ್, ರಾಜ್ಯ ಸರ್ಕಾರಕ್ಕೆ ಮೀಸಲಾತಿ ಹೆಚ್ಚಳ ಹಾಗೂ ಅದರ ಅನುಷ್ಠಾನದ ವಿಚಾರದಲ್ಲಿ ಸ್ಪಷ್ಟತೆ ಕಾಣಿಸುತ್ತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು. ಇದೊಂದು ಚುನಾವಣಾ ಗಿಮಿಕ್ ರೀತಿ ಕಾಣಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರಕ್ಕೆ 2020 ರಲ್ಲಿ ವರದಿ ಸಲ್ಲಿಕೆ: ಮೀಸಲಾತಿ ಹೆಚ್ಚಳ ವಿಚಾರದಲ್ಲಿ ನಾಗಮೋಹನ ದಾಸ್ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಆಧರಿಸಿ ಮೀಸಲಾತಿ ಅನುಷ್ಠಾನ ಮಾಡಲಾಗಿದೆ. ಈ ವಿಚಾರಕ್ಕೆ ಸಮಿತಿ ರಚನೆ ಮಾಡಿದವರು ಯಾರು ?, ಯಾವ ಸರ್ಕಾರ ಎಂಬುದನ್ನು ಜನರಿಗೆ ತಿಳಿಸಬೇಕು.
2011 ರ ಜನಗಣತಿಯ ಪ್ರಕಾರ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಕೊಡಬೇಕಿತ್ತು. ಅದು ನಡೆಯದಿದ್ದಾಗ, 2019 ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದ ಸಮಿತಿ ರಚಿಸಿ ಅದರನ್ವಯ ಸರ್ಕಾರಕ್ಕೆ 2020 ರಲ್ಲಿ ವರದಿ ನೀಡಿತ್ತು.
ಅದಾದ 2 ವರ್ಷಗಳ ಬಳಿಕ ಬಿಜೆಪಿ ಸರ್ಕಾರ ನಾಗಮೋಹನ ದಾಸ್ ನೀಡಿದ್ದ ವರದಿಯನ್ನು ಒಪ್ಪಿದ್ದೇವೆ ಎಂದು ಹೇಳಿದ್ದಾರೆ ಅಷ್ಟೇ. ಬಿಜೆಪಿ ಮತ್ತು ಆರ್ ಎಸ್ ಎಸ್ನವರು ಮೀಸಲಾತಿ ವಿರೋಧಿಗಳು. ಪ್ರಸನ್ನಾನಂದಪುರಿ ಸ್ವಾಮಿಗಳ ನಿರಂತರ ಹೋರಾಟದ ಫಲವಾಗಿ ಮೀಸಲಾತಿ ದೊರೆತಿದೆ ಹೊರತು, ಶ್ರೀರಾಮುಲು ಇಂದಲ್ಲ ಎಂದು ಇದೇ ಸಂದರ್ಭದಲ್ಲಿ ಟೀಕಿಸಿದರು.
ರೈಲಿಗೆ ಮರುನಾಮಕರಣ ಮಾಡಿದ್ದೇ ಪ್ರತಾಪ್ ಸಿಂಹರ ಸಾಧನೆ: ಟಿಪ್ಪು ಎಕ್ಸ್ ಪ್ರೆಸ್ಗೆ ಒಡೆಯರ್ ಎಕ್ಸ್ ಪ್ರೆಸ್ ಎಂದು ಮರುನಾಮಕರಣ ಮಾಡಿದ್ದೇ ಸಂಸದ ಪ್ರತಾಪ್ ಸಿಂಹರ ಬಹುದೊಡ್ಡ ಸಾಧನೆಯಾಗಿದೆ. ಟಿಪ್ಪು ದೇಶ ದ್ರೋಹಿ ಅಲ್ಲ, ಅವರ ಹೆಸರನ್ನು ಬದಲಾಯಿಸುವ ಬದಲು ಹೊಸದೊಂದು ರೈಲಿಗೆ ನಾಮಕರಣ ಮಾಡಿದ್ದರೆ ಆಗುತ್ತಿತ್ತು. ಕಾಲ ಹೀಗೆ ಇರುವುದಿಲ್ಲ, ಇವರು ಈಗ ಬದಲಾವಣೆ ಮಾಡಿರುವುದೆಲ್ಲ ಮುಂದೆ ತಿರುವು - ಮುರುವಾಗಲಿದೆ. ನಮ್ಮ ಸರ್ಕಾರ ಬಂದಾಗ ಇವರು ಮಾಡಿರುವ ಬದಲಾವಣೆಗಳನ್ನು ನಾವು ಮತ್ತೆ ಬದಲಾಯಿಸುತ್ತೇವೆ ಎಂದು ತಿರುಗೇಟು ನೀಡಿದರು.
ಯತ್ನಾಳ್ರಿಂದ ಭ್ರಷ್ಟಾಚಾರ ಆರೋಪ: ಯತ್ನಾಳ್ ಬಿಜೆಪಿ ಸರ್ಕಾರವನ್ನು ಭ್ರಷ್ಟ ಸರ್ಕಾರ ಎಂದು ಕರೆಯುತ್ತಿದ್ದಾರೆ. ಬಿಜೆಪಿ ಸರ್ಕಾರ ಮತ್ತು ಶಾಸಕರ ವಿರುದ್ಧ ಅವರ ಪಕ್ಷದ ನಾಯಕರು ಮತ್ತು ಶಾಸಕರೆ ಟೀಕಿಸುತ್ತಿದ್ದಾರೆ. ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಜೈಲಿಗೆ ಹೋಗಿ ಬಂದವರು ಎಂದು ದೂರಿದ್ದಾರೆ.
ಇದನ್ನೂ ಓದಿ: ಮುನಿರತ್ನರನ್ನು ಮಂತ್ರಿ ಸ್ಥಾನದಿಂದ ತೆಗೆದುಹಾಕಿ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್
ಸಿಎಂ ಬೊಮ್ಮಾಯಿ ಅವರು ಯಡಿಯೂರಪ್ಪ ಜೊತೆ ರಾಜ್ಯ ಪ್ರವಾಸ ಮಾಡಿದರೆ, ಮುಂದಿನ ಚುನಾವಣೆಯಲ್ಲಿ ಒಂದೆರಡು ಸೀಟುಗಳನ್ನು ಸಹಾ ಗೆಲ್ಲುವುದಿಲ್ಲ ಎಂದು ಬಿಜೆಪಿಗರೆ ಕರೆಕೊಟ್ಟಿದ್ದಾರೆ. ಈ ರೀತಿ ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವವರ ಮೇಲೆ ಮೊದಲು ಶಿಸ್ತು ಕ್ರಮ ಕೈಗೊಳಲ್ಲಿ. ನಂತರ ಬೇರೆಯವರ ಬಗ್ಗೆ ಮಾತನಾಡಲಿ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ತಿರುಗೇಟು ನೀಡಿದರು.