ಮೈಸೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಹೋದರನ ಮೃತದೇಹ ಕಂಡು ತೀವ್ರ ಹೃದಯಾಘಾತಕ್ಕೊಳಗಾಗಿ ಸಹೋದರಿಯೂ ಸಾವನ್ನಪ್ಪಿರುವ ಮನಕಲಕುವ ಘಟನೆ ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.
ಕೊಡಗಿನ ಪೊನ್ನಪೇಟೆಯ ನಿವಾಸಿ ಮಂಜುನಾಥ್ ಮತ್ತು ರತ್ನ ದಂಪತಿಯ ಮಗಳಾದ ರಶ್ಮಿ(21) ಸಾವನ್ನಪ್ಪಿರುವ ಯುವತಿ. ಇವರು ಮೈಸೂರಿನ ವಿಜಯ ನಗರದಲ್ಲಿ ವಾಸವಾಗಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದರು.
ಅಪಘಾತದಲ್ಲಿ ಅಣ್ಣ ಸಾವು:
ಯುವತಿ ರಶ್ಮಿಯ ದೊಡ್ಡಪ್ಪನ ಮಗ ಕೀರ್ತಿರಾಜ್ ಸೋಮವಾರ ರಾತ್ರಿ ಹುಣಸೂರು ತಾಲೂಕಿನ ಮೈಸೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಬಳಿಕ ಅಣ್ಣನ ಮೃತದೇಹ ನೋಡಲು ರಶ್ಮಿ ಹುಣಸೂರಿನ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಬಂದಿದ್ದಳು.
ಈ ಸಂದರ್ಭದಲ್ಲಿ ಅಣ್ಣನ ಮೃತದೇಹ ಕಂಡ ಆಕೆ ಆಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಳು. ತಕ್ಷಣ ಪೋಷಕರು ರಶ್ಮಿಯನ್ನು ಎತ್ತಿಕೊಂಡು ಆಸ್ಪತ್ರೆಗೆ ಸೇರಿಸುವ ಹೊತ್ತಿಗೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಸಹೋದರನ ಮೃತದೇಹ ನೋಡಲು ಬಂದ ರಶ್ಮಿಯೂ ಸಾವನ್ನಪ್ಪಿದ್ದರಿಂದ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ: ಇಂಡಿಯಲ್ಲಿ ಮದ್ಯ ಸೇವನೆಗೆ ಕರೆದು ಯುವಕನ ಕೊಲೆ.. ಪ್ರೇಯಸಿಯ ಸಹೋದರನಿಂದಲೇ ಕೃತ್ಯ