ಮೈಸೂರು: ಪ್ರವಾಹದಿಂದ ಹಾನಿಗೊಳಗಾಗಿ ನಮಗೆ ಕೂಲಿ ಕೆಲಸ ಸಿಗುತ್ತಿಲ್ಲ. ಆದರೂ ಖಾಸಗಿ ಫೈನಾನ್ಸ್ ಕೊಟ್ಟವರ ಕಿರುಕುಳ ಹೆಚ್ಚಾಗಿದೆ. ಹಾಗಾಗಿ ನಮಗೆ ಕಾಲಾವಕಾಶ ಕೊಡಿಸಿ ಎಂದು ಗಿರಿಜನ ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ 15 ದಿನಗಳಿಂದ ತೀವ್ರ ನೆರೆಯಿಂದ ಭಾರಿ ನಷ್ಟವಾಗಿದೆ. ಇದರಿಂದ ನಮಗೆ ಕೂಲಿ ಕೆಲಸವು ಸಿಗುತ್ತಿಲ್ಲ. ನಾವು ಇದನ್ನೇ ನಂಬಿ ವಾರದ ಹಾಗೂ ತಿಂಗಳ ಕಂತುಗಳನ್ನು ಸಂಘಗಳಿಂದ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದೇವೆ.
ಆದರೆ, ಈಗ ನಮಗೆ ಕೂಲಿ ಇಲ್ಲದೆ ಹಣ ಸಿಗುತ್ತಿಲ್ಲ. ಸಾಲ ಪಡೆದ ಸಂಘಗಳಿಗೆ ಸ್ವಲ್ಪ ಕಾಲಾವಕಾಶ ನೀಡಲು ಮನವಿ ಮಾಡಿದ್ದೆವು. ಆದರೆ, ಅವರು ಹಣ ಕಟ್ಟಿ ಎಂದು ಮನೆಗೆ ಬಂದು ಕಿರುಕುಳ ನೀಡುತ್ತಾರೆ. ಇದರಿಂದ ರಕ್ಷಿಸಿ, ನಮಗೆ ಸ್ಪಲ್ಪ ಕಾಲಾವಕಾಶ ಕೊಡಿಸಿ ಎಂದು ಹುಣಸೂರು ತಾಲೂಕಿನ ಹಾನಗೂಡು ಹೋಬಳಿಯ ಕೊಳವಿಗೆ ಗಿರಿ ಹಾಡಿಯ ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.