ಮೈಸೂರು: ಪ್ರಧಾನಿ ಮೋದಿ ಅವರು ಹೆಲಿಕ್ಯಾಪ್ಟರ್ ಮೂಲಕ ಮೈಸೂರಿಗೆ ಬಂದಿಳಿದಾಗ ಬಿಜೆಪಿ ಸಂಸದರು ಹಾಗೂ ಶಾಸಕರೊಂದಿಗೆ ಜೆಡಿಎಸ್ ಶಾಸಕ ಜಿ. ಟಿ ದೇವೇಗೌಡ ಅವರು ಸ್ವಾಗತಿಸಲು ಆಗಮಿಸಿದ್ದರು.
ಮೈಸೂರು ವಿಶ್ವವಿದ್ಯಾಲಯದ ಮುಂಭಾಗ ಇರುವ ಓವಲ್ ಮೈದಾನಕ್ಕೆ ಹೆಲಿಕ್ಯಾಪ್ಟರ್ ನಲ್ಲಿ ಪ್ರಧಾನಿ ಮೋದಿ ಅವರು ಬಂದಾಗ, ಸಚಿವರಾದ ನಾರಾಯಣ್ ಗೌಡ, ಗೋಪಾಲಯ್ಯ, ಡಾ. ಕೆ. ಸುಧಾಕರ್, ಸಂಸದ ಪ್ರತಾಪಸಿಂಹ, ಶಾಸಕ ನಾಗೇಂದ್ರ ಅವರೊಂದಿಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಜೆಡಿಎಸ್ ಪಕ್ಷದಿಂದ ದೂರ ಇರುವ ಜಿ. ಟಿ ದೇವೇಗೌಡ ಅವರು, ಪಕ್ಷದ ಹಲವಾರು ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಇಂದು ಮೋದಿ ಸ್ವಾಗತಿಸಲು ಬಿಜೆಪಿಯ ಮುಖಂಡರೊಂದಿಗೆ ಬಂದಿರುವುದು ಅಚ್ಚರಿ ತಂದಿದೆ.
ಮೋದಿ ಖುದ್ದಾಗಿ ಪತ್ರ ಕೊಟ್ಟ ಜಿ ಟಿ ದೇವೇಗೌಡ
ವೇಗವಾಗಿ ಬೆಳೆಯುತ್ತಿರುವ ಮೈಸೂರಿಗೆ ಮೆಟ್ರೊ ರೈಲು ಕೊಡಿ ಅಂತ ಪ್ರಧಾನಿ ಮೋದಿ ಅವರಿಗೆ ಶಾಸಕ ಜಿ. ಟಿ. ದೇವೇಗೌಡ ಅವರು ಖುದ್ದಾಗಿ ಪತ್ರ ಕೊಟ್ಟು ಮನವಿ ಮಾಡಿದರು.
ಮೈಸೂರಿನ ಓವೆಲ್ ಮೈದಾನದ ಹೆಲಿಪ್ಯಾಡ್ ಗೆ ಹೆಲಿಕ್ಯಾಪ್ಟರ್ ಮೂಲಕ ಬಂದಿಳಿದ ಮೋದಿ ಅವರಿಗೆ ನಿಮ್ಮ ಸಮರ್ಥ ಮತ್ತು ಪರೋಪಕಾರಿ ನಾಯಕತ್ವದಲ್ಲಿ ದೇಶವು ಮುನ್ನಡೆಯುತ್ತಿದೆ. ನಿಮ್ಮ ನಾಯಕತ್ವ ಚಿರಾಯುವಾಗಲಿ. ಐತಿಹಾಸಿಕ ಮೈಸೂರು ನಗರಕ್ಕೆ ನಿಮ್ಮ ಭೇಟಿಯ ಈ ಸಂದರ್ಭದಲ್ಲಿ ನಾನು ಕೆಲವು ವಿಷಯ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ ಎಂದಿದ್ದಾರೆ.
ಮೈಸೂರು ನಗರ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ. ಇಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದನ್ನು ಬಗೆಹರಿಸಲು ಮೆಟ್ರೋ ರೈಲಿನ ಅಗತ್ಯವಿದೆ.
ಇದು ನಗರದ ಅಭಿವೃದ್ಧಿಗೆ ಕಾರಣವಾಗುತ್ತದೆ. ಮೈಸೂರು ನಗರಕ್ಕೆ ವಿಶೇಷ ಹಣವನ್ನು ಮಂಜೂರು ಮಾಡಿ, ಮೂಲಭೂತ ಸೌಕರ್ಯಗಳು ಹೆಚ್ಚಿಸಿ ಸೌಲಭ್ಯ ನೀಡಿ. ಇದರಿಂದ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದಿದ್ದಾರೆ.