ಮೈಸೂರು: ಕೊರೊನಾ 2ನೇ ಅಲೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಬೆಡ್ ಹಾಗೂ ಆಕ್ಸಿಜನ್ ಸಿಗದೆ ಸೋಂಕಿತರು ಪರದಾಡುತ್ತಿರುವ ನಡುವೆ ಮೈಸೂರಿನಲ್ಲಿ ಸಂಘಟನೆಯೊಂದು ಜನರ ಸಹಾಯಕ್ಕೆ ಧಾವಿಸಿದೆ.
ನಗರದ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ಮುಂದೆ ಕೊರೊನಾ ಸೋಂಕಿತರು ಬೆಡ್ ಹಾಗೂ ಆಕ್ಸಿಜನ್ ಪಡೆಯಲು ಸಾಲುಗಟ್ಟಿ ನಿಲುತ್ತಿದ್ದಾರೆ. ಕೆಲ ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರು ಆಸ್ಪತ್ರೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ವ್ಯವಸ್ಥೆ ಮಾಡಿಸಿಕೊಡುವಂತೆ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಕೆಲವೊಮ್ಮೆ ಬೆಡ್ ಸಿಗದಿದ್ದರೂ ಬೇಡ, ಆಕ್ಸಿಜನ್ ವ್ಯವಸ್ಥೆಯಾದರೂ ಮಾಡಿಕೊಡಿ ಎಂದು ದುಂಬಾಲು ಬೀಳುತ್ತಿದ್ದಾರೆ.
ಆಕ್ಸಿಜನ್ ಸಿಗದೆ ಪರದಾಡುತ್ತಿರುವ ರೋಗಿಗಳ ಪಾಲಿಗೆ ಯುನೈಟೆಡ್ ವಿಷನ್ ವೆಲ್ಫೇರ್ ಅಂಡ್ ಚಾರಿಟೇಬಲ್ ಟ್ರಸ್ಟ್ ಬದುಕಿನ ಆಶಾಕಿರಣ ಮೂಡಿಸುತ್ತಿದೆ. ಕೊರೊನಾ 2ನೇ ಅಲೆ ತೀವ್ರಗತಿಯಲ್ಲಿ ಏರುತ್ತಿರುವುದರಿಂದ ಆಕ್ಸಿಜನ್ ಕೊರತೆಯನ್ನು ಮನಗಂಡ ಈ ಟ್ರಸ್ಟ್, ರೋಗಿಗಳಿಗೆ ಉಚಿತ ಆಕ್ಸಿಜನ್ ಒದಗಿಸಲು ಮುಂದಾಗಿದೆ.
ಈವರೆಗೆ 12 ಮಂದಿ ರೋಗಿಗಳಿಗೆ ಆಕ್ಸಿಜನ್ ನೀಡಿ ಜೀವ ಉಳಿಸಿದೆ. ಬಡವರಿಗೆ ಮೊದಲ ಆದ್ಯತೆ ನೀಡಿ, ನಂತರ ಮಧ್ಯಮ ವರ್ಗದವರಿಗೂ ಕಾಳಜಿ ತೋರಲಾಗುತ್ತದೆ. ಈ ಟ್ರಸ್ಟ್ನಿಂದ ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ಪಡೆಯಬೇಕಾದರೆ ಮೊದಲಿಗೆ ಈ ಟ್ರಸ್ಟ್ಗೆ 5 ಸಾವಿರ ರೂ. ಡೆಪಾಸಿಟ್ ಮಾಡಬೇಕು. ಆಕ್ಸಿಜನ್ ಬಳಸಿಕೊಂಡು ನಂತರ ಸಿಲಿಂಡರ್ ವಾಪಸ್ ನೀಡಿದರೆ ಡೆಪಾಸಿಟ್ ಮಾಡಿದ 5 ಸಾವಿರ ರೂ. ಹಣ ವಾಪಸ್ ನೀಡುತ್ತಾರೆ. ಅಲ್ಲದೆ ಫ್ರೀ ಸರ್ವೀಸ್ ಕೂಡ ನೀಡುತ್ತಾರೆ.
ಈ ಬಗ್ಗೆ ಫಲಾನುಭವಿ ಮಹೇಶ್ ಕುಮಾರ್ ಪ್ರತಿಕ್ರಿಯಿಸಿ, ಯುನೈಟೆಡ್ ವಿಷನ್ ವೆಲ್ಫೇರ್ ಅಂಡ್ ಚಾರಿಟೇಬಲ್ ಟ್ರಸ್ಟ್ ತನ್ನ ತಾಯಿಗೆ 2ನೇ ದೇವರ ರೀತಿ. ಇವರ ಸಕರಾತ್ಮಕ ಮಾತುಗಳೇ ನಮಗೆ ಸ್ಫೂರ್ತಿ. ಇವರ ಸೇವೆ ನಿರಂತರವಾಗಿರಲಿ ಎಂದು ಆಶಿಸಿದರು.
ಟ್ರಸ್ಟಿ ರಫಿಕ್ ಘೋರಿ ಮಾತನಾಡಿ, ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಬೆಡ್ ಸಿಗದೇ ಕಷ್ಟ ಪಡುತ್ತಿದ್ದಾರೆ. ಹಾಗಾಗಿ ಬಡವರಿಗೆ ಉಚಿತ ಸೇವೆ ನೀಡುವ ಉದ್ದೇಶದಿಂದ ಈ ಕಾರ್ಯ ಮಾಡುತ್ತಿದ್ದೇವೆ. ಸಿಲಿಂಡರ್ ಅಗತ್ಯವಿರುವ ವ್ಯಕ್ತಿ 5 ಸಾವಿರ ರೂ. ಜಮಾ ಮಾಡಬೇಕು. ಅದನ್ನು ಮರುಪಾವತಿಸಲಾಗುತ್ತದೆ. ರೋಗಿಯು ಚೇತರಿಸಿಕೊಳ್ಳುವವರೆಗೂ ಟ್ರಸ್ಟ್ ವತಿಯಿಂದ ಉಚಿತವಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಸಲಾಗುತ್ತದೆ ಎಂದು ತಿಳಿಸಿದರು.
ಹಿಂದೂ-ಮುಸ್ಲಿಂ ಎಂಬ ಯಾವುದೇ ಧರ್ಮದ ಭೇದವಿಲ್ಲದೆ ಮೊದಲು ನಾವೆಲ್ಲ ಭಾರತೀಯರು ಎಂಬ ಸಂದೇಶ ಟ್ರಸ್ಟ್ದ್ದಾಗಿದೆ. ಕೋವಿಡ್ ವಿರುದ್ಧ ಹೋರಾಡಿ ಜೀವ ಉಳಿಸಿಕೊಳ್ಳೋಣ ಎನ್ನುವುದು ಇವರ ಆಶಯವಾಗಿದೆ.