ಮೈಸೂರು: ಕಾರ್ಖಾನೆಯ ಕೆಮಿಕಲ್ಸ್ ನೀರು ಕುಡಿದು ನಾಲ್ಕು ಕುರಿಗಳು ಮೃತಪಟ್ಟಿದ್ದು, ಕುರಿಗಳನ್ನೇ ನಂಬಿದ್ದ ರೈತ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿರುವ ಘಟನೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಹುಂಡಿ ಗ್ರಾಮದಲ್ಲಿ ನಡೆದಿದೆ.
ಅಡಕನಹುಂಡಿ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆ ಕೆಮಿಕಲ್ಸ್ ನೀರನ್ನು ಹೊರಗಡೆ ಬಿಟ್ಟ ಪರಿಣಾಮ, ಗ್ರಾಮದ ಸಿದ್ದೇಗೌಡ ಎಂಬುವರಿಗೆ ಸೇರಿದ 4 ಕುರಿಗಳು ಆ ನೀರನ್ನೇ ಕುಡಿದು ಮೃತಪಟ್ಟಿವೆ. ಸಿದ್ದೇಗೌಡರು ಎಂದಿನಂತೆ ಕುರಿಗಳನ್ನು ಮೇಯಿಸಿಕೊಂಡು ಮನೆಗೆ ಹೋಗುವಾಗ ಕಾರ್ಖಾನೆಯ ಬಳಿ ಹರಿಯುತ್ತಿದ್ದ ಕೆಮಿಕಲ್ಸ್ ನೀರನ್ನು ಕುಡಿದು ಕುರಿಗಳು ಮೃತಪಟ್ಟಿವೆ ಎಂದು ರೈತ ಸಿದ್ದೇಗೌಡ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ನಾಲ್ಕು ಕುರಿಗಳಿಂದ ನನಗೆ ಸುಮಾರು 60 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದ್ದು, ಸೂಕ್ತ ಪರಿಹಾರವನ್ನು ಕಂಪನಿಯವರು ಕೊಡಬೇಕೆಂದು ಸಿದ್ದೇಗೌಡ ಒತ್ತಾಯಿಸಿದ್ದಾರೆ.
ಕುರಿಯನ್ನೇ ನಂಬಿ ಬದುಕುತ್ತಿರುವ ನಮ್ಮ ಬದುಕು ಇಂಥ ಘಟನೆಗಳು ಸಂಭವಿಸಿದಾಗ ಬೀದಿಗೆ ಬಂದಂತಾಗುತ್ತದೆ. ಕಾರ್ಖಾನೆಯ ಕೆಮಿಕಲ್ ನೀರಿನಿಂದ ರೈತರು ಸಾಕಾಣಿಕೆ ಮಾಡುವ ಸಾಕು ಪ್ರಾಣಿಗಳಿಗೆ ಕುತ್ತು ಬರುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.