ಮೈಸೂರು: 2014ರ ಲೋಕಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಹುಸಿಗೊಳಿಸಿರುವ ಪ್ರಧಾನಿ ಮೋದಿ ಅವರು ಶ್ರೀರಾಮನಿಗೆ ದ್ರೋಹ ಮಾಡಿದವರ ಪೈಕಿ ನಂಬರ್ ಒನ್ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಶ್ರೀರಾಮ ಪತ್ನಿ ಸೀತಾದೇವಿ ರಕ್ಷಣೆಗಾಗಿ ರಾವಣನೊಂದಿಗೆ ಹೋರಾಟ ಮಾಡಿದ. ಆದರೆ, ಮೋದಿ ತಮ್ಮ ಶ್ರೀಮತಿಯವರಿಗೆ ರಕ್ಷಣೆ ಕೊಟ್ಟಿಲ್ಲ. ಅಲ್ಲದೇ, ಜನಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
2023ಕ್ಕೆ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಸೋಲು ಖಚಿತ. ಅಲ್ಲದೇ, 2024ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಸೋಲಲಿದೆ. ಅದಕ್ಕಾಗಿ ಬಿಜೆಪಿಯವರು ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮೋದಿಗೆ ಮುತ್ಸದ್ದಿತನ ಇಲ್ಲ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡುವ ಪ್ರಧಾನಿ ಮೋದಿ ಅವರಿಗೆ ರಾಜಕೀಯ ಮುತ್ಸದ್ದಿತನ ಇಲ್ಲ. ಪ್ರಧಾನಿಯಾದ ಮೇಲೆ ಹುದ್ದೆಯ ಘನತೆ ಅರಿತು ಮಾತನಾಡಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.
ಬಿಜೆಪಿಯವರು ನೈಜ ಹಿಂದುತ್ವವಾದಿಗಳಲ್ಲ, ಮನುವಾದಿಗಳು ಹಾಗೂ ಡೋಂಗಿವಾದಿಗಳು. ಧಮ್ಮು ತಾಕತ್ತಿದ್ದರೆ ಮಾಂಸಹಾರಿಗಳ ವೋಟು ಬೇಡ ಎನ್ನಲಿ ಎಂದು ಉಗ್ರಪ್ಪ ಸವಾಲು ಹಾಕಿದರು.
ಓದಿ: ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ರಾಜ್ಯ, ರಾಷ್ಟ್ರ ಚುನಾವಣೆಯಲ್ಲಿ ಉತ್ತಮ ಫಲಿತಾಂಶ: ಉಗ್ರಪ್ಪ