ಮೈಸೂರು: ನಾನು ರಾಜಕೀಯ ಸಾಹಿತ್ಯವನ್ನು ಬರೆದಿದ್ದೇನೆ, ಆದ್ದರಿಂದ ನನ್ನನ್ನು ರಾಜಕೀಯ ಸಾಹಿತ್ಯ ಕ್ಷೇತ್ರದಿಂದ ಗುರುತಿಸಿ ವಿಧಾನ ಪರಿಷತ್ಗೆ ಆಯ್ಕೆ ಮಾಡಿದ್ದಾರೆ. ಇದು ನನಗೆ ಸಂತಸ ತಂದಿದೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಇಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವನ್ನು ಭೇಟಿಯಾದ ವೇಳೆ ಹೆಚ್ ವಿಶ್ವನಾಥ್ ಮಾಧ್ಯಮದವರೊಂದಿಗೆ ಮಾತನಾಡಿದರು. ಬೇರೆ ಬೇರೆ ಜನ ಬೇರೆ ರೀತಿ ಮಾತನಾಡಿಕೊಳ್ಳಲಿ. ಆದರೆ ನಾನು ರಾಜಕೀಯ ಸಾಹಿತ್ಯವನ್ನು ಬರೆದಿರುವವನು. ಇದನ್ನು ಬರೆಯುವುದು ಅಪರೂಪ. ನಾನು ಕಾದಂಬರಿ ಬರೆದವನಲ್ಲ, ರಾಜಕೀಯದ ವಸ್ತು ಸ್ಥಿತಿ ಬರೆದವನು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ರಾಜಕಾರಣದ ಬಗ್ಗೆ, ಆಡಳಿತದ ಬಗ್ಗೆ, ಜನ ಜೀವನದ ಬಗ್ಗೆ ಬರೆದಿರುವೆ. ಆದ್ದರಿಂದ ನನ್ನನ್ನು ಸಾಹಿತ್ಯ ಕ್ಷೇತ್ರಕ್ಕೆ ಗುರುತಿಸಿ ವಿಧಾನ ಪರಿಷತ್ಗೆ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.
ಮಂತ್ರಿ ಸ್ಥಾನದ ಬಗ್ಗೆ ಕಾನೂನಿನಲ್ಲಿ ಯಾವುದೇ ಅಡೆ ತಡೆ ಇಲ್ಲ. ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ಪಷ್ಟವಾಗಿ ಚುನಾವಣೆಗೆ ನಿಂತು ಅರ್ಹರಾಗಿ ಬನ್ನಿ ಎಂದು ಹೇಳಿತ್ತು. ಅದರಂತೆ ಚುನಾವಣೆಯಲ್ಲಿ ಗೆಲುವು-ಸೋಲು ಬೇರೆ. ಆದರೆ ಅನರ್ಹತೆ ಕೊನೆಗೊಂಡು ಅರ್ಹ ಎಂದು ಹೇಳಿದೆ. ಮಂತ್ರಿ ಸ್ಥಾನದ ಬಗ್ಗೆ ನಂತರ ನೋಡೋಣ. ರಾಜಕೀಯಕ್ಕೆ ಕೊನೆ ಅಲ್ಲ. ಪಕ್ಷ ಚುನಾವಣೆಗೆ ಸ್ಪರ್ಧಿಸಿ ಎಂದರೆ ಲೋಕಸಭೆ ಹಾಗೂ ಇತರ ಚುನಾವಣೆಯಲ್ಲೂ ಸ್ಪರ್ಧಿಸಬಹುದು. ಇದನ್ನು ಪಕ್ಷ ಮತ್ತು ಜನ ತೀರ್ಮಾನ ಮಾಡುತ್ತಾರೆ ಎಂದರು.
ಬೀದಿಯಲ್ಲಿ ನಿಂತು ಲೆಕ್ಕ ಕೇಳಬಾರದು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊರೊನಾ ವಿಚಾರದಲ್ಲಿ ಬೀದಿಯಲ್ಲಿ ನಿಂತು ಲೆಕ್ಕ ಕೇಳುವುದು ಸರಿಯಲ್ಲ. ಸಂಸದೀಯ ವ್ಯವಸ್ಥೆಯಲ್ಲಿ ರೀತಿ -ರಿವಾಜುಗಳಿವೆ. ಅದನ್ನು ಎಲ್ಲಿ ಕೇಳಬೇಕೋ ಅಲ್ಲಿ ಕೇಳಬೇಕು. ಅದಕೋಸ್ಕರ ಪಬ್ಲಿಕ್ ಅಕೌಂಟ್ಸ್ ಕಮಿಟಿ ಇದೆ. ಜೊತೆಗೆ ಅಸೆಂಬ್ಲಿ ಶುರುವಾಗಲಿದ್ದು, ಅಲ್ಲಿ ಲೆಕ್ಕ ಕೇಳಿದರೆ ಕೊಡುತ್ತಾರೆ. ಬೀದಿಯಲ್ಲಿ ನಿಂತು ಗ್ರಾಮ ಪಂಚಾಯತ್ ಸದಸ್ಯನೂ ಕೂಡ ಈತರಹ ಲೆಕ್ಕ ಕೇಳುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್ ವಿಶ್ವನಾಥ್ ಹರಿಹಾಯ್ದರು.
ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾಂಗ್ರೆಸ್ ಕಾರಣ ಎಂದು ಕುಮಾರಸ್ವಾಮಿ ಅರ್ಧ ಸತ್ಯ ಹೇಳಿದ್ದಾರೆ. ಪೂರ್ತಿ ಸತ್ಯ ಹೇಳುತ್ತಿಲ್ಲ. ಪೂರ್ತಿ ಸತ್ಯ ಹೇಳಲಿ ಎಂದು ಇದೇ ಸಂದರ್ಭದಲ್ಲಿ ಹೆಚ್.ವಿಶ್ವನಾಥ್ ಒತ್ತಾಯಿಸಿದರು.