ಮೈಸೂರು: ವಿಧಾನಸೌಧದಲ್ಲೂ ತಕ್ಕಡಿ ಇರುತ್ತೆ. ತಕ್ಕಡಿ ತೂಗುತ್ತಿರುತ್ತದೆ. ನ್ಯಾಯ ಯಾವ ಕಡೆ ಇದೆಯೋ ಆ ಕಡೆ ತೂಗುತ್ತದೆ. ಕಾಲ ಬಂದಾಗ ಎಲ್ಲದಕ್ಕೂ ಉತ್ತರ ಸಿಗುತ್ತೆ. ಕಾಲಚಕ್ರ ತಿರುಗಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ನನ್ನ ಮುಂದಿನ ನಡೆ ಅಂತ ಏನೂ ಇಲ್ಲ. ಎಲ್ಲವೂ ನಿಮಗೆ ಗೊತ್ತಾಗುತ್ತದೆ. ಸ್ಪಲ್ಪ ದಿನಗಳವರೆಗೆ ಕಾದು ನೋಡಿ ಎಂದರು.
ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇದೆಯೆಂಬ ವಿಚಾರವಾಗಿ ಪ್ರಸ್ತಾಪಿಸಿದ ಡಿ.ಕೆ.ಶಿವಕುಮಾರ್, ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ನಮ್ಮ ನಾಯಕರು. ಮೊದಲು ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ಸದ್ಯ ಪ್ರತಿಪಕ್ಷದ ನಾಯಕರಾಗಿದ್ದಾರೆ. ನಾನೊಬ್ಬ ಶಾಸಕ, ಅವರ ಕೈ ಕೆಳಗೆ ನಾವು ಸದಸ್ಯರಾಗಿ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಉಪಚುನಾವಣೆಯಲ್ಲಿ ಪಕ್ಷ ಯಾವುದೇ ಜವಾಬ್ದಾರಿ ಕೊಟ್ರು ನಿಭಾಯಿಸಲು ಸಿದ್ದನಿದ್ದೇನೆ. 1975 ರಿಂದ ಸಹ ಕಾಂಗ್ರೆಸ್ ಬಾವುಟವನ್ನು ಹೊತ್ಕೊಂಡಿದ್ದೇನೆ. ರಾಜೀವ್ ಗಾಂಧಿ, ಬಂಗಾರಪ್ಪ ಕಾಲದಿಂದಲೂ ಸಹ ನಿಷ್ಠೆಯಿಂದ ನಡೆದಿದ್ದೇನೆ. ಈಗಲೂ ಸಹ ಪಕ್ಷದ ಹೈಕಮಾಂಡ್ ಕೊಡುವ ಕೆಲಸ ಮಾಡುತ್ತೇನೆ. ನನ್ನ ರಾಷ್ಟ್ರೀಯ ನಾಯಕರು ಯಾವ ಜವಾಬ್ದಾರಿ ಕೊಡ್ತಾರೋ ಅದನ್ನು ನಾನು ನಿಭಾಯಿಸುತ್ತೇನೆ. ನನಗೆ ಸ್ಥಾನಮಾನ ನೀಡುವ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಮಾಡ್ತಾರೆ ಎಂದು ಡಿಕೆಶಿ ಹೇಳಿದರು.
ನಮ್ಮ ನಾಡದೇವತೆ ಚಾಮುಂಡೇಶ್ವರಿ ದುಃಖವನ್ನು ದೂರ ಮಾಡುವ ದೇವಿ. ಆ ದುರ್ಗಾದೇವಿಯ ಸ್ವರೂಪ ಚಾಮುಂಡೇಶ್ವರಿ. ರಾಜ್ಯಕ್ಕೆ, ನನಗೆ, ನಮ್ಮ ಬಂಧುಗಳಿಗೆ, ರಾಜ್ಯದ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದೆ. ದೇವರು ಯಾರ ಆಸ್ತಿನೂ ಅಲ್ಲ. ನನಗೆ ಮೊದಲಿಂದಲೂ ಸಹ ಇಷ್ಟವಾದ ದೇವರು ಚಾಮುಂಡೇಶ್ವರಿಯಮ್ಮ. ನಾನು ಕಷ್ಟದಲ್ಲಿದ್ದಾಗ ಸಾವಿರಾರು ಜನರು ಹರಕೆ ಮಾಡಿಕೊಂಡಿದ್ದರು. ಕೋರ್ಟ್ ಬಳಿ ಬಂದಾಗ ವಿಚಾರ ಹೇಳಿದ್ದರು. ಇವತ್ತು ಪವಿತ್ರವಾದ ಶುಕ್ರವಾರ ದೇವಿಗೆ ಪೂಜೆ ಸಲ್ಲಿಸಿದ್ದೇವೆ. ನನ್ನ ಕಷ್ಟ ಪರಿಹಾರವಾಗಲಿ ಅಂತ ಬೇಡಿದ್ದೇನೆ ಎಂದರು.
ಕಾರ್ತಿಕ ಮಾಸದ ಹಿನ್ನೆಲೆ ರಾಜಕಾರಣಿಗಳು ಭೇಟಿ ನೀಡಿದ್ದಾರೆ: ಶಶಿಶೇಖರ್ ದೀಕ್ಷಿತ್
ಕಾರ್ತಿಕ ಮಾಸದ ಹಿನ್ನೆಲೆ ಶುಕ್ರವಾರ ಶುಭ ದಿನವಾಗಿರುವುದರಿಂದ ರಾಜಕಾರಣಿಗಳು ಬರುತ್ತಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಹೇಳಿದರು.