ಮೈಸೂರು: ಟೀಕೆ ಮಾಡುವುದು ಬಿಜೆಪಿಯವರ ಸಂಸ್ಕೃತಿ. ಅವರು ಓದಿರುವ ಪುಸ್ತಕನೇ ಅಂತಹದ್ದು, ಅದನ್ನು ಚೇಂಜ್ ಮಾಡಲು ಆಗುತ್ತಾ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ವಿರುದ್ಧ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಹಿಂದೆ ನನ್ನ ವಿರುದ್ಧ ಮಾತನಾಡಿದ್ದಕ್ಕೆ ಕೇಸ್ ಹಾಕಿದ್ದೆ, ಅದು ಈಗಲೂ ನ್ಯಾಯಾಲಯದಲ್ಲಿದೆ. ಬಿಜೆಪಿ ನಾಯಕರು ಇಂತಹ ಟೀಕೆಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ, ಅದೇ ಅವರ ಸಂಸ್ಕೃತಿ ಎಂದು ಕಿಡಿಕಾರಿದ್ರು.
ಕಾಂಗ್ರೆಸ್ನಲ್ಲಿ ಮೂಲ ಹಾಗೂ ವಲಸಿಗರು ಎಂಬ ಗುಂಪುಗಳಿಲ್ಲ. ಎಲ್ಲಿ ಯಾರು ಕೂಡ ಬ್ರಾಂಡ್ ಅಲ್ಲ. ಆ ಹಣೆಪಟ್ಟಿಯನ್ನು ಮಾಧ್ಯಮದವರು ಮಾಡಿರೋದು ಅಷ್ಟೇ. ರಾಜಕೀಯದಲ್ಲಿ ನಮ್ಮ ನೆರಳನ್ನು ನಾವೇ ನಂಬುವುದಕ್ಕೆ ಆಗ್ತಿಲ್ಲ. 30-40 ವರ್ಷ ಆದವರು ಬೇರೆ ಬೇರೆ ಪಕ್ಷಗಳಿಗೆ ಹೋಗ್ತಾರೆ. ಮುಂದೆ ರಾಜಕಾರಣದಲ್ಲಿ ಏನಾಗಲಿದೆ ಎಂಬುದು ಗೊತ್ತಾಗಲಿದೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ರು.
ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಹೈಕಮಾಂಡ್ಗೆ ಬಿಟ್ಟ ವಿಚಾರ. ನಾನು ಕಾರ್ಯಕರ್ತ, ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಬಗ್ಗೆ ಪ್ರಶ್ನೆಯನ್ನು ಹಾಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೇ ಕೇಳಿ ಎಂದು ಡಿಕೆಶಿ ಹೇಳಿದ್ರು.