ಮೈಸೂರು: ಮಾಸಿಕ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ಸಿದ್ದರಾಮಯ್ಯ ನಾನು ಒಂದು ಗಂಟೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಹಾಗಾಗಿ ಎಲ್ಲ ಪೂಜ್ಯರಿಗೆ ಕ್ಷಮೆಯಾಚಿಸುತ್ತೇನೆ ಎಂದು ಭಾಷಣ ಆರಂಭಿಸಿದರು.
ಪ್ರತೀ ವರ್ಷ ಜಾತ್ರಾಮಹೋತ್ಸವದಲ್ಲಿ ಭಾಗವಹಿಸುತ್ತೇನೆ. ಈ ಬಾರಿ ಕೊರೊನಾ ಹಿನ್ನೆಲೆ ಸರಳವಾಗಿ ಕಾರ್ಯಕ್ರಮ ನಡೆಯುತ್ತಿದೆ. ಜನರ ಆರೋಗ್ಯ ದೃಷ್ಠಿಯಿಂದ ಶ್ರೀಗಳು ಸರಳವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಹಾಗಾಗಿ ಶ್ರೀಗಳು ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಸೂಚಿಸಿದ್ದರು. ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದರು.
ಸುತ್ತೂರು ನನ್ನ ಮತ ಕ್ಷೇತ್ರ. ಈಗ ನನ್ನ ಮಗ ಎಂಎಲ್ಎ ಆಗಿದ್ರೂ ಕೂಡಾ ಇದು ನನ್ನ ಕ್ಷೇತ್ರವೇ. ಯಾಕಂದ್ರೆ ಈ ಕ್ಷೇತ್ರದಿಂದ ಗೆದ್ದು ನಾನು ಸಿಎಂ ಆಗಿದ್ದವನು. ವರುಣಾ ಕ್ಷೇತ್ರದ ಜನರನ್ನ ನಾನು ಮರೆಯಲಿಕ್ಕೆ ಸಾಧ್ಯ ಇಲ್ಲ. ಹಾಗಯೇ ಸುತ್ತೂರು ಮಠ ನನಗೆ ಆತ್ಮೀಯವಾದ ಮಠಗಳಲ್ಲಿ ಒಂದು. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಪಾಂಡಿತ್ಯ ಹೊಂದಿರುವ, ಅಪಾರ ಜ್ಞಾನಿಗಳು. ಅವರೂ ಕೂಡಾ ಈ ಕಾರ್ಯಕ್ರಮ ಭಾಗಿಯಾಗಿದ್ದಾರೆ, ಅವರ ಹಿತವಚನ ಕೇಳಲು ನಾನೂ ಕೂಡಾ ಕಾಯುತ್ತಿದ್ದೇನೆ ಎಂದರು.
ಸರಳ ವಿವಾಹಗಳು ಇವತ್ತಿನ ಪರಿಸ್ಥಿತಿಗೆ ಬಹಳ ಅವಶ್ಯಕವಾಗಿದೆ. ಸರಳ ವಿವಾಹದ ಜೊತೆಗೆ ಅಂತರ್ಜಾತಿ ವಿವಾಹಕ್ಕೂ ಸ್ವಾಗತ. ಜಾತಿ ವ್ಯವಸ್ಥೆ ಹೋಗಿ ಸಮಸಮಾಜ ನಿರ್ಮಾಣಕ್ಕೆ ಹಾಗೂ ಜಾತ್ಯತೀತ ಸಮಾಜಕ್ಕೆ ಈ ಅಂತರ್ಜಾತಿ ವಿವಾಹ ಅಗತ್ಯ. ಮೇಲು ಜಾತಿ ಮತ್ತು ಅಸ್ಪೃಶ್ಯ ಜಾತಿಗೆ ಬಸವಣ್ಣನವರು ಮದುವೆ ಮಾಡಿಸಿದ್ದರು. 850ವರ್ಷಗಳ ಹಿಂದೆಯೇ ಇಂತಹ ಕ್ರಾಂತಿಕಾರಿ ಚಿಂತನೆ ಮಾಡಿದ್ದವರು ಬಸವಣ್ಣ. ಇಂದಿನ ಪಾರ್ಲಿಮೆಂಟ್, ಅಸೆಂಬ್ಲಿಗಳನ್ನ ಅನುಭವ ಮಂಟಪ ನಡೆಸುವ ಮೂಲಕ ಆವಾಗಲೇ ಮಾಡಿದ್ದರು. ಹಾಗಾಗಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಲು ಮುಂದಾಗಿದ್ದೆ ಎಂದರು.
ಓದಿ : ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ - ಸೋಮಶೇಖರ್ ಮುಖಾಮುಖಿ
ಆದರೆ, ಅನುಭವ ಮಂಟಪ ನಿರ್ಮಾಣ ಆರಂಭವಾಗುವಷ್ಠರಲ್ಲಿ ಅಧಿಕಾರ ಕಳೆದುಕೊಂಡೆ. ಈಗಿನ ರಾಜ್ಯ ಸರ್ಕಾರ ಈಗತಾನೆ ಗುದ್ದಲಿ ಪೂಜೆ ಮಾಡಿದ್ದಾರೆ, ಶೀಘ್ರದಲ್ಲೇ ಅನುಭವ ಮಂಟಪ ನಿರ್ಮಾಣವಾಗುತ್ತೆ ಎಂದರು. ಸಮಾಜದಲ್ಲಿ ನಾಲ್ಕು ವರ್ಣಗಳಾಗಿ ವಿಂಗಡಿಸಿಬಿಟ್ಟಿದ್ದಾರೆ. ಇಂತಹ ವರ್ಣ ಭೇಧ ನೀತಿ, ಜಾತಿ ವ್ಯವಸ್ಥೆ ತೊಲಗಬೇಕು. ಸಮಸಮಾಜ ನಿರ್ಮಾಣವಾಗಬೇಕು ಎಂದರು.
ಭಾಷಣದಲ್ಲಿ ಹಳೆಯ ನೆನಪು ಮೆಲುಕು ಹಾಕಿದ ಸಿದ್ದರಾಮಯ್ಯ, ನಾನು ಚಿಕ್ಕ ವಯಸ್ಸಿನಲ್ಲಿ ವೀರ ಮಕ್ಕಳ ಕುಣಿತ ಕುಣಿಯುತ್ತಿದ್ದೆ. ನಾನು ವೀರ ಮಕ್ಕಳ ಕುಣಿತದಲ್ಲಿ ನಂಬರ್ ಒನ್. ಸುತ್ತೂರು ಪಕ್ಕದ ಬೆಳಗುಂದ ಗ್ರಾಮದಲ್ಲಿ ವೀರ ಮಕ್ಕಳ ಕುಣಿತ ಕುಣಿಯಲು ಬಂದಿದ್ದೆ. ವಾಪಸ್ ಬರುವಾಗ ಸುತ್ತೂರಿನ ಕಡೆಯಿಂದ ಹೊಗುತ್ತಿದ್ದೆವು. ಆಗ ರಾಜೇಂದ್ರ ಸ್ವಾಮಿಗಳ ಭೇಟಿ ಮಾಡಿದ್ದೆವು. ಮೊದಲ ಭೇಟಿಯಲ್ಲಿ ಅವರ ಮುಂದೆ ವೀರ ಮಕ್ಕಳ ಕುಣಿತ ಕುಣಿದೆವು. ಅದಕ್ಕೆ ಮೆಚ್ಚಿ ಅವರು ನನಗೆ 5 ರೂಪಾಯಿ ಹಣ ಕೊಟ್ಟಿದ್ದರು, ಅದರಲ್ಲಿ ನಾನು ಒಂದು ಕುರಿ ಕೊಂಡು ಸಾಕಿದ್ದೆ. ಅದರಲ್ಲಿ ಸಾಕಷ್ಟು ಲಾಭ ಗಳಿಸಿದ್ದೆ ಎಂದು ಭಾಷಣದಲ್ಲಿ ತಮ್ಮ ಹಳೆಯ ನೆನಪುಗಳನ್ನ ಸಿದ್ದರಾಮಯ್ಯ ಮೆಲುಕು ಹಾಕಿದರು.