ಮೈಸೂರು : ಬಿಜೆಪಿಯವರು ದಲಿತ ಮುಖ್ಯಮಂತ್ರಿಯನ್ನು ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೇಸರಿ ಪಾಳಯಕ್ಕೆ ಸವಾಲು ಹಾಕಿದ್ದಾರೆ. ದಲಿತ ವ್ಯಕ್ತಿ ಸಿಎಂ ಆಗಬೇಕಾದರೆ ಅದು ಬಿಜೆಪಿಯಿಂದ ಸಾಧ್ಯ ಎಂದು ನಾರಾಯಣಸ್ವಾಮಿ ಹೇಳಿಕೆ ನೀಡಿದ್ದರು. ಇದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.
ರಾಜ್ಯಸಭಾ ಚುನಾವಣೆಯಲ್ಲಿ ನಮಗೆ ಮತಗಳ ಕೊರತೆ ಇದ್ದರೂ ನಮಗೂ ಕೂಡ ಆತ್ಮಸಾಕ್ಷಿಯ ಮತಗಳು ಬರುತ್ತವೆ, ಜೆಡಿಎಸ್‌ನವರು ನಮಗೆ ಬೆಂಬಲ ನೀಡುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನ ಮಂಡಕಳ್ಳಿ ಏರ್ಪೋರ್ಟ್‌ನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿ, ನನ್ನ ಬಳಿ ಸಿದ್ದರಾಮಯ್ಯ ಮಾತನಾಡಿದ್ದಾರೆಯೇ? ಮಾತನಾಡಿದ್ದಾರೆ, ಸಂತೋಷ ಎಂದು ವ್ಯಂಗ್ಯವಾಡಿದರು.
ರಾಜ್ಯಸಭಾ ಚುನಾವಣೆಯಲ್ಲಿ ಹೆಚ್ ಡಿ. ದೇವೇಗೌಡರನ್ನ ಗೆಲ್ಲಿಸಿದ್ದೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಹೆಚ್‌ಡಿಕೆ, ದೇವೇಗೌಡರ ವಿರುದ್ಧ ಬಿಜೆಪಿಯವರು ಕ್ಯಾಂಡಿಡೇಟ್ ಹಾಕದೆ ಇದ್ದ ನಿರ್ಧಾರ ನೋಡಿ ಕಾಂಗ್ರೆಸ್‌ನವರು ಮೌನವಾದರು. ಈ ಕಾರಣಕ್ಕೆ ದೇವೇಗೌಡರನ್ನ ನಾವೇ ಗೆಲ್ಲಿಸಿದ್ದೇವೆ ಎಂಬ ಬಡಾಯಿ ಬೇಡ ಎಂದು ಹರಿಹಾಯ್ದರು.
ಶಾಸಕ ಜಿ ಟಿ ದೇವೇಗೌಡ ಇನ್ನೂ ಜೆಡಿಎಸ್‌ನಲ್ಲೇ ಇದ್ದಾರೆ. ಅವರೇ ಹೇಳಿದಂತೆ ಜೆಡಿಎಸ್ಗೆ ಮತ ಹಾಕಲಿದ್ದಾರೆ. ಯಾರು ವಿರೋಧ ಮಾಡುತ್ತಾರೋ ಮಾಡಲಿ. ಇದೇನೂ ನಮಗೆ ಹೊಸದಲ್ಲ, ಇದನ್ನೆಲ್ಲಾ ಮೆಟ್ಟಿ ನಿಂತು ಗೆಲುವು ಸಾಧಿಸುತ್ತೇವೆ. ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಜೆಡಿಎಸ್ಗೆ ಉತ್ತಮ ವಾತಾವರಣ ಇದೆ ಎಂದರು.
ಇದನ್ನೂ ಓದಿ: ಜೊಮ್ಯಾಟೋದಲ್ಲಿ ಆರ್ಡರ್ ಮಾಡಿದ ಚಿಕನ್ನಲ್ಲಿ ಬಂತು ಮಿಕ್ಸರ್ ಬ್ಲೇಡ್!