ಮೈಸೂರು: ನಾವು ಅಧಿಕಾರಕ್ಕೆ ಬಂದ ತಕ್ಷಣ ಪೌರಕಾರ್ಮಿಕರನ್ನ ಖಾಯಂ ಮಾಡುತ್ತೇವೆ. ಏನೇ ಕಾನೂನು ತೊಡಕುಗಳಿದ್ದರು ಪೌರಕಾರ್ಮಿಕರನ್ನ ಖಾಯಂ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
ನಗರದ ಮಾನಸ ಗಂಗೋತ್ರಿಯಲ್ಲಿ ಪೌರಬಂಧು ಪುಸ್ತಕ ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ಪೌರಕಾರ್ಮಿಕರ ಪರವಾಗಿ ಹಲವು ಕೆಲಸಗಳನ್ನು ಮಾಡಿದೆ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ವೋಟ್ ಮಾಡುವ ಅಧಿಕಾರ ಇದ್ದರೆ ಸಾಲದು, ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯ ಬೇಕು ಎಂದು ಹೇಳಿದ್ದಾರೆ. ಹಣ ಇರುವವರ ಕೈಗೆ ಅಧಿಕಾರ ಹೋಗಬಾರದು. ಇಂದಿನ ವಿದ್ಯಾವಂತ ಯುವಕರು ಸಂವಿಧಾನವನ್ನ ಓದಿಕೊಳ್ಳಬೇಕು.
ಅಂಬೇಡ್ಕರ್ ಎಷ್ಟು ನೊಂದು ಹೇಳಿರಬೇಕು ಸಾಮಾಜಿಕ ನ್ಯಾಯದ ರಥವನ್ನ ಹಿಂದಕ್ಕೆಳೆಯಬೇಡಿ ಎಂದು. ಅಂತಹ ಸಂವಿಧಾನವನ್ನ ಬದಲಾಣೆ ಮಾಡುತ್ತೇವೆ ಅಂತ ಬಹಿರಂಗವಾಗಿ ಹೇಳಿದರೆ ಹೇಗೆ ಸಹಿಸಿಕೊಳ್ಳೋದು. ನೀವೆಲ್ಲಾ ಇದರ ವಿರುದ್ಧ ಸಿಡಿದೇಳಬೇಕು. ಅದಕ್ಕಾಗಿಯೇ ಸಂವಿಧಾನ ಬದಲಾವಣೆ ಮಾಡಿದರೆ ರಕ್ತಕ್ರಾಂತಿ ಆಗುತ್ತೆ ಅಂತ ನಾನು ಹೇಳಿದ್ದು ಅಂದ್ರು.
ಈಗ ಸಂವಿಧಾನದ ಆಶಯಗಳಿಗೆ ತಿಲಾಂಜಲಿ ಇಡುವ ಕೆಲಸ ಆಗುತ್ತಿದೆ. ಕೇವಲ ಶಾಸಕ ಸಚಿವ ಸ್ಥಾನಕ್ಕಾಗಿ ಕಾರಜೋಳ, ನಾರಾಯಣಸ್ವಾಮಿ ಇವರೆಲ್ಲಾ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಪಾರ್ಟಿಗೆ ಹೋಗಿದ್ದಾರೆ. ದಲಿತರ ಉದ್ಧಾರಕ್ಕಾಗಿ ಅವರು ಬಿಜೆಪಿಗೆ ಹೋಗಿಲ್ಲ. ಸ್ವಾರ್ಥಕ್ಕಾಗಿ ಅವರೆಲ್ಲಾ ಬಿಜೆಪಿಗೆ ಹೋಗಿದ್ದಾರೆ. ಸಂವಿಧಾನ ವಿರೋಧಿ ಪಾರ್ಟಿಗೆ ಹೋದ ಇವರು ದಲಿತರ ಕೈಗೆ ಚಿಪ್ಪು ಕೊಡುತ್ತಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದ ತಮ್ಮ ಸಂಪುಟ ಸದಸ್ಯರ ವಿರುದ್ಧ ಮೋದಿ ಕ್ರಮ ಕೈಗೊಳ್ಳಲಿಲ್ಲ. ಅವರ ಬೆಂಬಲ ಸೂಚನೆಯಂತೆ ಕೇಂದ್ರ ಸಚಿವ ಮಾತನಾಡಿದ್ದಾರೆ ಎಂದು ಕುಟುಕಿದರು. ಪ್ರಜಾಪ್ರಭುತ್ವದಲ್ಲಿ ಕಟ್ಟ ಕಡೆಯ ವ್ಯಕ್ತಿಗೆ ಮೊದಲ ಸ್ಥಾನ ಸಿಕ್ಕಾಗ ಅದಕ್ಕಿಂತ ಸಂತೋಷ ಬೇರೊಂದಿಲ್ಲ. ಅದಕ್ಕಾಗಿ ದಸರಾ ಮೆರವಣಿಗೆಯಲ್ಲಿ ಮೇಯರ್‌ಗೆ ಕುದುರೆ ಏರಲು ಅವಕಾಶ ಕೊಟ್ಟೆ. ಇದಕ್ಕಿಂತ ಖುಷಿ ಕೊಡುವುದು ಬೇರೊಂದಿಲ್ಲ. ಇದನ್ನ ನಾನು ರಾಜಕೀಯ ಲಾಭ ಪಡೆಯಲು ಮಾಡಲಿಲ್ಲ. ಇದು ನನ್ನ ಬದ್ಧತೆ, ಅಂಬೇಡ್ಕರ್ ಹಾಕಿ ಕೊಟ್ಟ ಜವಾಬ್ದಾರಿಯನ್ನ ನಿರ್ವಹಿಸಿದೆ ಎಂದರು.