ಮೈಸೂರು: ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ, ಅರಣ್ಯ ಇಲಾಖೆ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ. ಈ ವೇಳೆ ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಮುನ್ನೆಚ್ಚರಿಕೆ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಯಡಿಯಾಲ ಅರಣ್ಯ ಭಾಗದಲ್ಲಿ ಮಹಿಳೆಯನ್ನು ಕೊಂದಿದ್ದ ಗಂಡು ಹುಲಿಯನ್ನು ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದರು. ಈ ಮಧ್ಯೆ ಎರಡು ದಿನಗಳ ಹಿಂದೆ ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿರುವ ಚಿಕ್ಕ ಕಾನ್ಯಾ, ದೊಡ್ಡ ಕಾನ್ಯಾ, ಬ್ಯಾತಹಳ್ಳಿ, ಸಿಂಧುವಳ್ಳಿ ಪ್ರದೇಶಗಳಲ್ಲಿ ರಾತ್ರಿ ವೇಳೆ ಹುಲಿ ಕಾಣಿಸಿಕೊಂಡಿದೆ ಎಂಬ ಸ್ಥಳೀಯರ ಮಾಹಿತಿ ಅನ್ವಯ ಅರಣ್ಯ ಇಲಾಖೆ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ.
ಜಾಲತಾಣದಲ್ಲಿ ವಿಡಿಯೋ ವೈರಲ್: ನಂಜನಗೂಡು ಕೈಗಾರಿಕಾ ಪ್ರದೇಶದ ತಾಂಡ್ಯ ಹಾಗೂ ಅಡಕನಹಳ್ಳಿ ಪ್ರದೇಶದಲ್ಲಿ ಇರುವ ಬೀರಾ ಕೈಗಾರಿಕಾ ಪ್ರದೇಶ, ಮೇಲ್ಭಾಗದ ಮುಖ್ಯ ರಸ್ತೆಗಳಲ್ಲಿ ಮೂರು ಹುಲಿಗಳು ಓಡಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಮೈಸೂರಿನ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಈ ಹುಲಿಗಳು ಓಡಾಡುವ ಸ್ಥಳ ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿ ಇಲ್ಲ. ಇದೊಂದು ವೈರಲ್ ವಿಡಿಯೋ. ಆದರೂ ನಿಮ್ಮ ಎಚ್ಚರಿಕೆಗಾಗಿ ಹುಲಿ ಸೆರೆ ಕಾರ್ಯಾಚರಣೆಯನ್ನು ಸ್ಥಳೀಯರ ಮಾಹಿತಿ ಮೇರೆಗೆ ಆರಂಭಿಸಲಾಗಿದೆ ಎಂದು ಮೈಸೂರು ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ. ಎನ್. ಬಸವರಾಜ್ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಹುಲಿ ಕಾರ್ಯಾಚರಣೆ ಟೀಮ್ ಹೇಗಿದೆ: ಹುಲಿ ಸೆರೆ ಕಾರ್ಯಾಚರಣೆಗೆ ಬಳಸಿಕೊಂಡಿರುವ ಸಿಬ್ಬಂದಿಯಲ್ಲಿ ಚಿರತೆ ಕಾರ್ಯಪಡೆಗೆ 10 ಸಿಬ್ಬಂದಿ, ಮೈಸೂರು ವಲಯದ 20 ಸಿಬ್ಬಂದಿ, ನಗರ ಹಸಿರೀಕರಣದ 10 ಸಿಬ್ಬಂದಿ, ನಂಜನಗೂಡು ವಲಯ ವ್ಯಾಪ್ತಿಯ 10 ಸಿಬ್ಬಂದಿ, ಜೊತೆಗೆ 30 ಕ್ಯಾಮರಾ, ಜಿಎಸ್ಎಮ್ ಕ್ಯಾಮರಾ, ಪಿಟಿಜೆಡ್ ರೂಂ, ಎರಡು ಕ್ಯಾಮರಾಗಳ ಜೊತೆಗೆ ಮೂರು ಬೋನ್ಗಳನ್ನು ಬಳಸಿಕೊಳ್ಳಲಾಗಿದೆ. ಇದರ ಜೊತೆಗೆ ಹುಲಿ ಚಲನವಲನಗಳನ್ನು ಗುರುತಿಸಲು, ಸುತ್ತಮುತ್ತ ಡ್ರೋನ್ ಕ್ಯಾಮರಾ ಬಳಸಲಾಗುತ್ತಿದೆ. ಸುತ್ತಮುತ್ತ ಗ್ರಾಮಸ್ಥರು ಎಚ್ಚರಿಕೆಯಿಂದ ಇರವಂತೆ ಸಂದೇಶ ನೀಡಲಾಗಿದೆ.
ಹುಲಿ ಕಾಣಸಿಕೊಂಡಿದೆ ಎಂಬ ಸ್ಥಳೀಯರ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿ ಪ್ರಿಯಾ, ಮೈಸೂರು ವೃತ್ತದ ಉಪ ಅರಣ್ಯ ಸರಕ್ಷಾಣಾಧಿಕಾರಿ ಡಾ. ಬಸವರಾಜ್ ಸೇರಿದಂತೆ ಇತರ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಹುಲಿ ಸೆರೆಗೆ ಹಾಕಲಾಗಿರುವ ಬೋನ್ಗಳು ಮತ್ತು ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ನಂಜನಗೂಡು: ಮಹಿಳೆಯನ್ನು ಬಲಿ ಪಡೆದಿದ್ದ ಹುಲಿ ಕೊನೆಗೂ ಸೆರೆ