ಮೈಸೂರು: ಹುಲಿಯನ್ನು ಕೊಂದು ಅದರ ಉಗುರಿಗಾಗಿ ನಾಲ್ಕು ಕಾಲುಗಳನ್ನು ಕತ್ತರಿಸಿರುವ ಎಲ್ಲಾ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಒಂದು ವಾರದ ಹಿಂದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಲ್ಲಹಳ್ಳ ವಲಯದ ಕಾರ್ಮಾಡು ಗೇಟ್ ಹಾಗೂ ತಟ್ಟೆಕೆರೆ ಹಾಡಿ ಮಧ್ಯದ ಅರಣ್ಯ ಪ್ರದೇಶದಲ್ಲಿ ಹುಲಿಯ ಶವ ಪತ್ತೆಯಾಗಿತ್ತು.
ಉಗುರಿಗಾಗಿ ಹುಲಿಗೆ ಗುಂಡು ಹಾರಿಸಿ ಕೊಂದು, ನಾಲ್ಕು ಕಾಲುಗಳನ್ನು ಕತ್ತರಿಸಿಕೊಂಡು ಹೋಗಿದ್ದ ಮುಖ್ಯ ಆರೋಪಿಯಾದ ಸಂತೋಷ್ನನ್ನು ಬಂಧಿಸಲಾಗಿತ್ತು.
ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳಾದ ಕಾಂಡೇರ ಶಶಿ, ಕಾಂಡೇರ ಶರಣು, ವಟ್ಟಂಗಡ ರಾಜು ಹಾಗೂ ಕೆ.ಎಸ್ ರಾಜ ಎಂಬ ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ.
ಆರೋಪಿಗಳಿಂದ ಒಟ್ಟು 13 ಹುಲಿಯ ಉಗುರುಗಳು, 2 ಕೋರೆ ಹಲ್ಲು ಮತ್ತು 1.5 ಕೆಜಿ ಜಿಂಕೆ ಮಾಂಸ ಹಾಗೂ ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳು, ಬಂದೂಕು ಮತ್ತು ಕತ್ತಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.