ಮೈಸೂರು: ಬಾತ್ ರೂಂನಲ್ಲಿ ಬಳಸುವ ಆ್ಯಸಿಡ್ ತಯಾರಿಕಾ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಾಸಾಯನಿಕ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಯಾದವಗಿರಿಯ ಮೇದರ ಬ್ಲಾಕ್‌ನಲ್ಲಿ ರೈಲ್ವೆ ಟ್ರ್ಯಾಕ್ ಬಳಿ ಇಂದು ಸಂಜೆ ಘಟನೆ ನಡೆಯಿತು. ಬೆಂಕಿಯಿಂದಾಗಿ ಘಟನಾ ಸ್ಥಳದ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ರಾಸಾಯನಿಕ ವಸ್ತುವಿನ ಘಾಟು ಮತ್ತು ಹೊಗೆ ಆವರಿಸಿಕೊಂಡಿತ್ತು.
ನಾಗರಾಜು ಎಂಬವರಿಗೆ ಸೇರಿದ ಕಟ್ಟಡವನ್ನು ಇಮ್ರಾನ್ ಪಾಷ ಬಾಡಿಗೆಗೆ ಪಡೆದು ಆ್ಯಸಿಡ್ ಸೇರಿದಂತೆ ರಾಸಾಯನಿಕಗಳನ್ನು ತಯಾರಿಸುತ್ತಿದ್ದರು. ಅವಘಡದ ಸಂದರ್ಭದಲ್ಲಿ ಕಟ್ಟಡದಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದು, ಹೊರಗೋಡಿ ಬಂದಿದ್ದಾರೆ. ತಕ್ಷಣ ಸ್ಥಳೀಯರು ಜಮಾಯಿಸಿ ಅಗ್ನಿಶಾಮಕ ಠಾಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಮುಖ್ಯ ಅಗ್ನಿಶಾಮಕ ಅಧಿಕಾರಿ ಪಿ ಎಸ್ ಜಯರಾಮಯ್ಯ ನೇತೃತ್ವದಲ್ಲಿ 60 ಮಂದಿ ಸಿಬ್ಬಂದಿ ಒಂದೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಏಕಿವಿಯಸ್ ಫಿಲ್ಮಂ ಫಾರ್ಮಿಂಗ್ ಪೋಮ್ (ಎಎಫ್‌ಎಫ್‌ಎಫ್) ಎಂಬ ರಾಸಾಯನಿಕ ಬಳಸಿ ಬೆಂಕಿ ಆರಿಸಲಾಗಿದೆ.
ಇದನ್ನೂ ಓದಿ: 'ಧರ್ಮ ಬದಲಿಸಿ ಮದ್ವೆಯಾಗು ಇಲ್ಲವೇ ಆ್ಯಸಿಡ್ ದಾಳಿ..' ಹಿಂದೂ ಯುವತಿಗೆ ಬೆದರಿಸಿದ ಮುಸ್ಲಿಂ ಯುವಕನ ಬಂಧನ